ADVERTISEMENT

ಸಾಂಬಾರಿಗೆ ಸಾಸಿವೆ, ಖಾರದ ಪುಡಿ ಕೊಡಿ...

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:29 IST
Last Updated 21 ಮೇ 2017, 6:29 IST

ಕೊಪ್ಪಳ: ಅನ್ನಭಾಗ್ಯದ ಅಕ್ಕಿ ಜತೆ ಸಾಂಬಾರು ಮಾಡಲು ಸಾಸಿವೆ, ಜೀರಿಗೆ, ಖಾರದ ಪುಡಿ, ಸ್ವಲ್ಪ ಅರಶಿನ ಪುಡಿ ಕೊಟ್ಟಿದ್ರೆ ಇನ್ನೂ ಚೆನ್ನಾಗಿತ್ತು.– ಇದು ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಲ್ಲೂಕಿನ ಫಲಾನುಭವಿ ಸಿದ್ದಪ್ಪ ದನಗಾಯಿ ಹೇಳಿದ ಮಾತು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ರಾಯರಡ್ಡಿ, ‘ಈ ಬಾರಿ ಅಕ್ಕಿ ಕೊಟ್ಟಿದ್ದೀವಲ್ಲಾ. ಮುಂದೆ ಖಾರದಪುಡಿ, ಜೀರಿಗೆ ಕೊಡಬೇಕಾದರೆ ನಮ್ಮ ಪಕ್ಷಕ್ಕೆ ಓಟು ಹಾಕಿ ಮತ್ತೆ ಅಧಿಕಾರಕ್ಕೆ ತರಬೇಕು. ಆಗ ನೀವು ಕೇಳಿದ್ದನ್ನು ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಇದೇ ಯೋಜನೆಯಲ್ಲಿ ಜೋಳವನ್ನೂ ಕೊಡಿ, ಶೇಂಗಾ ಎಣ್ಣೆಯೂ ಬೇಕು’ ಎಂದು ಕುಷ್ಟಗಿ ತಾಲ್ಲೂಕಿನ ಫಲಾನುಭವಿಯೊಬ್ಬರು ಒತ್ತಾಯಿಸಿದರು.‘ಅನುದಾನಿತ ಶಾಲೆಗಳಿಗೂ ಶೂ, ಸಮವಸ್ತ್ರ ಕೊಡಬೇಕು’ ಎಂದು ಹಿರೇಮನ್ನಾಪುರದ ವಿದ್ಯಾರ್ಥಿ ಶ್ರೀಹರಿ ಕೋರಿದರು.

ADVERTISEMENT

ಪ್ರತಿಕ್ರಿಯಿಸಿದ ಸಚಿವರು, ‘ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅಲ್ಲಿ ಶೂ ಸಮವಸ್ತ್ರ ಕೊಡಲಾಗುತ್ತಿದೆ. ಆದ್ದರಿಂದ ಆ ಸೌಲಭ್ಯವನ್ನು ಅನುದಾನಿತ ಶಾಲೆಗಳಿಗೆ ವಿಸ್ತರಿಸಿಲ್ಲ ಎಂದರು.

ರಾಜೀವ್‌ ಆರೋಗ್ಯಭಾಗ್ಯ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಫಲಾನುಭವಿ ಚನ್ನಪ್ಪ ಎಂ.ಜಿ. ಕಾರಟಗಿ, ‘ಹೃದಯ ಶಸ್ತ್ರಚಿಕಿತ್ಸೆಗೆ ಶೇ 70ರಷ್ಟು ವೆಚ್ಚವನ್ನು ಈ ಯೋಜನೆ ಭರಿಸಿದೆ. ಆದರೆ, ಶಸ್ತ್ರಚಿಕಿತ್ಸೆಯ ನಂತರದ ಔಷಧಿ ವೆಚ್ಚ ತಿಂಗಳಿಗೆ ಸುಮಾರು ₹ 3 ಸಾವಿರದಷ್ಟು ಆಗುತ್ತದೆ. ಈ ವೆಚ್ಚಕ್ಕೂ ನೆರವು ನೀಡಬೇಕು. ಅಥವಾ ಕಡಿಮೆ ಬೆಲೆಯಲ್ಲಿ ಔಷಧಗಳು ಸಿಗುವಂತೆ ಮಾಡಬೇಕು ಎಂದರು.

‘ಪ್ರತಿಕ್ರಿಯಿಸಿದ ಸಚಿವರು, ‘ಒಂದೆರಡು ತಿಂಗಳಲ್ಲಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಕಡಿಮೆ ಬೆಲೆಗೆ ಔಷಧ ಸಿಗುವ ಜೆನೆರಿಕ್‌ ಔಷಧ ಮಳಿಗೆಗಳನ್ನು ತೆರೆಯಲಾಗುವುದು. ಶಸ್ತ್ರಚಿಕಿತ್ಸೆಯ ನಂತರದ ಔಷಧ ವೆಚ್ಚಕ್ಕೆ ನೆರವಾಗುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.‘ಕೃಷಿ ಯಂತ್ರಧಾರೆ ಯೋಜನೆಯಿಂದ ಬೇರೆಯವರ ಟ್ರ್ಯಾಕ್ಟರ್‌ ಅವಲಂಬನೆ ತಪ್ಪಿದೆ’ ಎಂದು ರೈತ ವಿರೂಪಾಕ್ಷಪ್ಪ ಆಗಳಕೇರಾ ಹೇಳಿದರು.

ಪಶುಭಾಗ್ಯ ಯೋಜನೆಯ ಸಬ್ಸಿಡಿ ಮೊತ್ತ ಹೆಚ್ಚಿಸಬೇಕು. ಇನ್ನಷ್ಟು ಹಸುಗಳನ್ನು ಖರೀದಿಸಲು ಅನುಕೂಲ ಕಲ್ಪಿಸಬೇಕು ಎಂದು ಗಂಗಾವತಿ ತಾಲ್ಲೂಕು ಕೋಟೆಕ್ಯಾಂಪ್‌ನ ನಾಗಮಣಿ ಕೋರಿದರು.

ಮಾದಿನೂರಿನ ಶಿವಪ್ಪ ಮಲ್ಲಪ್ಪ ಎತ್ತಿನಮನಿ ಅವರು ಕೃಷಿ ಭಾಗ್ಯ ಯೋಜನೆ ಕುರಿತು, ಹೇಮಾ ಬಾಣದ್‌ ಅವರು ಕ್ಷೀರ ಭಾಗ್ಯ ಕುರಿತು, ಅಲ್ಲಾಸಾಬ್‌ ಮನಿಯಾರ್‌ ಅವರು ಶಾದಿ ಭಾಗ್ಯ ಕುರಿತು, ಶಿವಯ್ಯ ನಿಂಗಯ್ಯ ಅವರು ವಿದ್ಯಾಸಿರಿ ಯೋಜನೆ ಕುರಿತು ಪ್ರತಿಕ್ರಿಯಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಬಿ.ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್‌ ಜುಲ್ಲು ಖಾದ್ರಿ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್‌ ಹೆಗ್ಡೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್‌ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

* * 

ಖಾರದಪುಡಿ, ಜೀರಿಗೆ ಕೊಡಬೇಕಾದರೆ ನಮ್ಮ ಪಕ್ಷಕ್ಕೆ ಓಟು ಹಾಕಿ ಮತ್ತೆ ಅಧಿಕಾರಕ್ಕೆ ತರಬೇಕು. ನೀವು ಕೇಳಿದ್ದನ್ನು ಕೊಡುತ್ತೇವೆ.
ಬಸವರಾಜ ರಾಯರಡ್ಡಿ,
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.