ADVERTISEMENT

ಸಿಎಂ ಎದುರು ಶಕ್ತಿ ಪ್ರದರ್ಶನಕ್ಕೆ ಅನ್ಸಾರಿ ಸಜ್ಜು

ಎಂ.ಜೆ.ಶ್ರೀನಿವಾಸ
Published 8 ಡಿಸೆಂಬರ್ 2017, 7:10 IST
Last Updated 8 ಡಿಸೆಂಬರ್ 2017, 7:10 IST

ಗಂಗಾವತಿ: ಕಾಂಗ್ರೆಸ್ ಸೇರಲು ಎದುರು ನೋಡುತ್ತಿರುವ ಶಾಸಕ ಇಕ್ಬಾಲ್ ಅನ್ಸಾರಿ, ಸರ್ಕಾರಿ ಕಾರ್ಯಕ್ರಮದ ಭಾಗವಾಗಿ ಡಿ.14ಕ್ಕೆ ನಗರಕ್ಕೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.

ಜ್ವರದ ಮಧ್ಯೆಯೂ ಗುರುವಾರ ತಮ್ಮ ಆಪ್ತರು, ಹಿತೈಷಿಗಳೊಂದಿಗೆ ರಹಸ್ಯ ಸಭೆಗಳನ್ನು ನಡೆಸಿದ ಅನ್ಸಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಗರದಲ್ಲಿ ಯಾವ ಮಾರ್ಗದಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆದೊಯ್ಯಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದರು.

‌ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬಂದಿಳಿಯುವ ಮುಖ್ಯಮಂತ್ರಿ ಅವರನ್ನು ಸಮೀಪದಲ್ಲಿರುವ ತಮ್ಮ ನಿವಾಸಕ್ಕೆ ಕರೆತಂದು ಅಲ್ಲಿಂದ ಮೆರವಣಿಗೆ ಮೂಲಕ ಕಾಲೇಜು ಮೈದಾನಕ್ಕೆ ಕರೆದೊಯ್ಯುವ ಬಗ್ಗೆ ಶಾಸಕರು ಸಭೆಯಲ್ಲಿ ಚರ್ಚಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಎದುರು ಗಂಗಾವತಿ ಕ್ಷೇತ್ರದಲ್ಲಿ ತಮಗಿರುವ ಸಾಮರ್ಥ್ಯವನ್ನು ತೋರಿಸಿಕೊಳ್ಳಲು ಅನ್ಸಾರಿ ಯೋಜನೆ ರೂಪಿಸಿದ್ದು, ನಗರದ 31 ವಾರ್ಡ್‌ಗಳಿಂದ ತಲಾ 500 ಜನರನ್ನು ಕಾರ್ಯಕ್ರಮಕ್ಕೆ ಕರೆತರುವಂತೆ ತಮ್ಮ ಆಪ್ತರಿಗೆ ಸೂಚನೆ ನೀಡಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಿಂದ ತಲಾ ಒಂದು ಸಾವಿರ ಜನರಂತೆ ಒಟ್ಟು ಒಂದು ಲಕ್ಷ ಜನರನ್ನು ಸೇರಿಸುವ ಗುರಿ ಹಾಕಿಕೊಂಡಿರುವ ಶಾಸಕ ಅನ್ಸಾರಿ ಬೆಂಬಲಿಗರು, ಉದ್ದೇಶಿತ ಯೋಜನೆ ಸಫಲತೆಗಾಗಿ ಗುರುವಾರದಿಂದಲೇ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿರು ವುದು ಸರ್ಕಾರಿ ಸಭೆಯಾದರೂ ವೇದಿಕೆ ನಿರ್ಮಾಣ, ಭದ್ರತೆ, ಅಗತ್ಯ ಸೌಲಭ್ಯ, ಸ್ವಚ್ಛತೆ, ಆಸನ, ಗಣ್ಯರ ಆಸನ, ವೇದಿಕೆ ಮೊದಲ, ಎರಡನೇ ಸಾಲಿನಲ್ಲಿ ಎಷ್ಟು ಕುರ್ಚಿ ಹೀಗೆ ಪ್ರತಿಯೊಂದು ತಯಾರಿಯ ಮೇಲೆ ನಿಗಾವಹಿಸುವಂತೆ ಶಾಸಕ ಅನ್ಸಾರಿ ತಮ್ಮ ಆಪ್ತರಿಗೆ ಸೂಚನೆ ಕೊಟ್ಟಿದ್ದಾರೆ.

ಅನ್ಸಾರಿ ಸೂಚನೆ ಮೇರೆಗೆ ನಗರಸಭೆ ಅಧ್ಯಕ್ಷೆ ಸಣ್ಣಹುಲಿಗೆಮ್ಮ, ಕಳೆದ ಎರಡು ದಿನದಿಂದ ನಿತ್ಯ ನಗರಸಭೆ ಅಧಿಕಾರಿಗಳೊಂದಿಗೆ ಸರಣಿ ಸಭೆ ಆಯೋಜಿಸಿ ಅಗತ್ಯ ಜವಾಬ್ದಾರಿಗಳ ಗುರಿ ಹಂಚಿಕೆ ಮಾಡುತ್ತಿದ್ದಾರೆ.

ಈಗಾಗಲೆ ನಗರದಲ್ಲಿ ಸಿಎಂ ಅವರನ್ನು ಆಹ್ವಾನಿಸುವ ಬ್ಯಾನರ್, ಕಟೌಟ್, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ನಗರದ ರಸ್ತೆಗಳು ದುರಸ್ತಿಗೊಂಡಿವೆ.ನಗರಸಭೆ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.

* * 

ಕಾರ್ಯಕ್ರಮದಲ್ಲಿ ಲೋಪವಾಗದಂತೆ ನಗರಸಭೆ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಸಿದ್ಧತೆಯ ಉಸ್ತುವಾರಿ ವಹಿಸಿಕೊಂಡಿದ್ದೇವೆ.
ಸಣ್ಣಹುಲಿಗೆಮ್ಮ ಕಾಮದೊಡ್ಡಿ ದೇವಪ್ಪ ಅಧ್ಯಕ್ಷೆ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.