ADVERTISEMENT

ಸ್ವಂತ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯ!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 11:15 IST
Last Updated 16 ನವೆಂಬರ್ 2017, 11:15 IST
ಸ್ವಂತ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯ!
ಸ್ವಂತ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯ!   

ಕುಷ್ಟಗಿ: ಖಾಸಗಿ ವೈದ್ಯರ ಮುಷ್ಕರದಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದು, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮೂರು ದಿನಗಳಿಂದ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿವೆ. ಅಲ್ಲದೆ, ಸರ್ಕಾರಿ ಆಸ್ಪತ್ರೆ ಬಳಿಯ ಅನೇಕ ಔಷಧ ಅಂಗಡಿಗಳೂ ಮುಚ್ಚಿದ್ದರಿಂದ ಜನರಿಗೆ ಔಷಧಗಳ ಕೊರತೆ ಎದುರಾಗಿತ್ತು.

ವೈದ್ಯ ನಾಪತ್ತೆ: ಖಾಸಗಿ ವೈದ್ಯರು ಲಭ್ಯವಿಲ್ಲದ ಕಾರಣ ಚಿಕಿತ್ಸೆಗಾಗಿ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬಂದರೆ ಅಲ್ಲಿಯೂ ವೈದ್ಯರ ಕೊರತೆ ಕಂಡುಬಂದಿತು.

ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿದ್ದರೂ ಕೇವಲ ಒಬ್ಬ ವೈದ್ಯ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಬೆಳಿಗ್ಗೆ 9ಕ್ಕೆ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೋದ ವೈದ್ಯಾಧಿಕಾರಿ ವಿರೂಪಾಕ್ಷಪ್ಪ ಹಳ್ಳಳ್ಳಿ ಅವರು ಮಧ್ಯಾಹ್ನದವರೆಗೂ ಆಸ್ಪತ್ರೆಗೆ ಬರಲಿಲ್ಲ. ಆಸ್ಪತ್ರೆಯಲ್ಲಿ ವೈದ್ಯ ಇಲ್ಲದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

‘ವಿರೂಪಾಕ್ಷಪ್ಪ ಹಳ್ಳಳ್ಳಿ ಅವರು ಇಲ್ಲಿನ ಬಸ್‌ನಿಲ್ದಾಣದ ರಸ್ತೆಯಲ್ಲಿರುವ ತಮ್ಮ ಸ್ವಂತ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು’ ಎಂದು ಪಟ್ಟಣದ ಬಸವರಾಜ ಪಾಟೀಲ, ಹನುಮೇಶ ತಾವರಗೇರಾ ದೂರಿದರು.

ಆಸ್ಪತ್ರೆಗೆ ಮಾಧ್ಯಮದವರು ಭೇಟಿ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ವೈದ್ಯಾಧಿಕಾರಿ ಕರ್ತವ್ಯಕ್ಕೆ ಹಾಜರಾದರು. ಇದನ್ನು ಕಂಡು ಅಲ್ಲಿದ್ದ ಜನರು ಅಚ್ಚರಿ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳು ಮುಚ್ಚಿವೆ. ಸರ್ಕಾರಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆಗೆ ವೈದ್ಯರಿಲ್ಲ ಎಂದರೆ ಹೋಗುವುದಾದರೂ ಎಲ್ಲಿಗೆ ಎಂದು ಜನರು ಅಸಮಾಧಾನ ಹೊರಹಾಕಿದರು.

ಸರ್ಕಾರಿ ಆಸ್ಪತ್ರೆಯಲ್ಲಿನ ಸಮಸ್ಯೆ ಕುರಿತಂತೆ ಮಾಹಿತಿಗಾಗಿ ‘ಪ್ರಜಾವಾಣಿ’ ದೂರವಾಣಿ ಮೂಲಕ ಸಂಪರ್ಕಿಸಿದಾಗ ತಾವು ಸಭೆಯಲ್ಲಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.