ADVERTISEMENT

‘ಸ್ವಚ್ಛ ಆಡಳಿತ ನೀಡಿದ ಸಿದ್ದರಾಮಯ್ಯ’

ಕನಕಗಿರಿ: ಹಾಲುಮತ ಸಮಾಜದ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 10:28 IST
Last Updated 5 ಏಪ್ರಿಲ್ 2018, 10:28 IST

ಕನಕಗಿರಿ: ಐದು ವರ್ಷ ಯಾವುದೇ ಭ್ರಷ್ಟಾಚಾರ, ಅವ್ಯವಹಾರ ಇಲ್ಲದೆ ಪೂರ್ಣಾವಧಿ ಸರ್ಕಾರ ನಡೆಸಿದ ಕೀರ್ತಿ ಹಾಲುಮತ ಸಮಾಜದ  ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ತಿಳಿಸಿದರು.ಸಮೀಪದ ಚಿರ್ಚನಗುಡ್ಡ ತಾಂಡಾದ ಉಮೇಶ ಭಂಗಿ ಅವರ ತೋಟದಲ್ಲಿ ಮಂಗಳವಾರ ಆಯೋಜಿಸಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಹಾಲುಮತ ಕುರುಬ ಸಮಾಜದ ಕಾಂಗ್ರೆಸ್‌ ಬೆಂಬಲಿತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗದ ಸಮಾಜದ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ತಲುಪಿವೆ. ಆದರೆ, ಇದನ್ನು ಸಹಿಸದ ವಿರೋಧ ಪಕ್ಷದವರು ಸಲ್ಲದ ಅಪಪ್ರಚಾರ ನಡೆಸಿರುವುದು ಸರಿ ಅಲ್ಲ ಎಂದರು. ಸಿದ್ದರಾಮಯ್ಯ ಅವರು ಶೋಷಿತ ಸಮಾಜದವರಿಗೆ ಶೈಕ್ಷಣಿಕ, ರಾಜಕೀಯ ಸ್ಥಾನಮಾನ ನೀಡಿದ್ದನ್ನು ಜಾತಿ, ಧರ್ಮವನ್ನು ಒಡೆದು ಆಡಳಿತ ನಡೆಸುವ ಬಿಜೆಪಿಯವರು ಸಹಿಸುತ್ತಿಲ್ಲ ಎಂದು ಟೀಕಿಸಿದರು.ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕಾದರೆ, ಕ್ಷೇತ್ರದಲ್ಲಿ  ಶಿವರಾಜ ತಂಗಡಗಿ ಅವರನ್ನು ಬೆಂಬಲಿಸಬೇಕೆಂದು ಕೋರಿದರು. ಸಿದ್ದರಾಮಯ್ಯ ಹಾಗೂ ತಂಗಡಗಿ ಅವರ ಅವಿರತ ಶ್ರಮದಿಂದ ಕ್ಷೇತ್ರದಲ್ಲಿ ಎರಡು ತಾಲ್ಲೂಕು ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗಿದೆ. ಕನಕಗಿರಿ, ಕಾರಟಗಿಗಳು ಕ್ರಮವಾಗಿ ಪಟ್ಟಣ ಪಂಚಾಯಿತಿ, ಪುರಸಭೆಯಾಗಿ ಮೇಲ್ದರ್ಜೆಗೆ ಏರಿವೆ. ನದಿ ಪಾತ್ರದ ಗ್ರಾಮಗಳಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

ಹಾಲುಮತ ಕುರುಬ ಸಮಾಜದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿದ್ದಪ್ಪ ನೀರ್ಲೂಟಿ ಮಾತನಾಡಿ, ಹಾಲುಮತ ಸಮಾಜದ ನಾಗಪ್ಪ ಸಾಲೋಣಿ  ಪಕ್ಷಾಂತರಕ್ಕೆ ಹೆಸರಾಗಿದ್ದಾರೆ. ಅವರು ಬಿಜೆಪಿಗೆ ಸೇರಿದ್ದು ಅವರನ್ನು ಯಾರು ಬೆಂಬಲಿಸಬಾರದು. ಶಾಸಕ ತಂಗಡಗಿ ಅವರು ಕ್ಷೇತ್ರದ ಹಾಲುಮತ ಕುರುಬ ಸಮಾಜದವರಿಗೆ ಜಿ.ಪಂ ಉಪಾಧ್ಯಕ್ಷ ಹಾಗೂ ಗಂಗಾವತಿ ತಾ.ಪಂ ಅಧ್ಯಕ್ಷ ಸ್ಥಾನ ಸೇರಿದಂತೆ ಕ್ಷೇತ್ರದ ಅನೇಕರಿಗೆ ಎಪಿಎಂಸಿ, ಗ್ರಾ.ಪಂ, ಸಹಕಾರಿ ರಂಗಗಳಲ್ಲಿ ವಿವಿಧ ಸ್ಥಾನಮಾನ ಕಲ್ಪಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯ ಬಸಂತಗೌಡ ಪಾಟೀಲ ಮಾತನಾಡಿ, ಸಾಮಾಜಿಕ ನ್ಯಾಯ, ಬದ್ಧತೆ ರೂಢಿಸಿಕೊಂಡಿರುವ ಕಾಂಗ್ರೆಸ್‌ ಎಲ್ಲರಿಗೂ ಅಧಿಕಾರ ನೀಡಿದೆ. ಸಮಬಾಳು, ಸಮಪಾಲು ತತ್ವ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ತಿಳಿಸಿದರು.

ಪ್ರಮುಖರಾದ ವಕೀಲ ರಾಮಚಂದ್ರ, ಪರಕಿ ಶರಣಪ್ಪ, ದೇವರಾಜ ಬರಗೂರು ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಬಾಲಪ್ಪ ಆರಾಪುರ, ಎಪಿಎಂಸಿ ನಿರ್ದೇಶಕರಾದ ಜನಗಂಡೆಪ್ಪ ಪೂಜಾರ, ಶಿವಪ್ಪ, ತಾ.ಪಂ ಸದಸ್ಯ ಡಣಾಪುರ ಫಕೀರಪ್ಪ, ಪ್ರಮುಖರಾದ ಶಿವಪ್ಪ, ಹನುಮಂತಪ್ಪ ಪನ್ನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.