ADVERTISEMENT

ಹೊನಗಡ್ಡಿ: ಹೆಜ್ಜೆ ಹೆಜ್ಜೆಗೂ ಕಾಣುವ ಸಮಸ್ಯೆ

ಸಮೀಪದ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:10 IST
Last Updated 14 ಮಾರ್ಚ್ 2017, 6:10 IST
ತಾವರಗೇರಾ ಸಮೀಪದ ಹೊನಗಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮುಗಿಬಿದ್ದಿರುವ ಜನ
ತಾವರಗೇರಾ ಸಮೀಪದ ಹೊನಗಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮುಗಿಬಿದ್ದಿರುವ ಜನ   

ತಾವರಗೇರಾ: ಸಮೀಪದ ಹೊನಗಡ್ಡಿ ಗ್ರಾಮದಲ್ಲಿ ವಿವಿಧ ಸಮಸ್ಯೆಗಳ ಗೂಡು ರೂಪುಗೊಂಡಿದೆ. ಇಲ್ಲಿ ಸಿ.ಸಿ ರಸ್ತೆ ನಿರ್ಮಾಣ ಮಾಡ ಬೇಕಿದೆ. ಕೆಲವರಿಗೆ ವೃದ್ಧಾಪ್ಯ ವೇತನ ಸಿಕ್ಕಿಲ್ಲ. ಫ್ಲೊರೈಡ್‌ಯುಕ್ತ ನೀರಿನಿಂದ ಮುಕ್ತಿಗೆ ಶುದ್ಧ ನೀರಿನ ಘಟಕದ ಅವಶ್ಯವಿದೆ. 3 ಕಿರುನೀರು ಸರಬರಾಜು ತೊಟ್ಟಿಯಲ್ಲಿ ಸಮರ್ಪಕ ನೀರು ಪೂರೈಕೆ ಮಾಡುತ್ತಿಲ್ಲ. ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ತಲೆದೋರಿದೆ. ಗ್ರಾಮದ ಸಂಪರ್ಕ ರಸ್ತೆಗಳು ಡಾಂಬರೀಕರಣ ಇಲ್ಲದೆ ಹದೆಗೆಟ್ಟಿವೆ.

ಬರದಿಂದ ತತ್ತರಿಸಿದರೂ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಆರಂಭಿಸಲಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಮೂರು ತಿಂಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿ ದ್ದಾರೆ. ಗ್ರಾಮದ 3 ಕೊಳವೆಬಾವಿಗಳಲ್ಲಿ ಒಂದರಲ್ಲಿ ನೀರು ಸಿಗುತ್ತಿದೆ. ಉಳಿದವುಗಳ ದುರಸ್ತಿ ಮಾಡಿದರೆ ಜಾನುವಾರುಗಳಿಗೆ ಮತ್ತು ಜನರ ದಿನ ನಿತ್ಯ ಬಳಕೆಗೆ ನೀರು ಪಡೆಯಬಹುದು.

3 ಕಿರುನೀರು ಸರಬರಾಜು ತೊಟ್ಟಿ ಗಳಿಗೆ ಸಹ ಸಮರ್ಪಕ ನೀರು ಪೂರೈಕೆ ಮಾಡುತ್ತಿಲ್ಲ.   ಆದರೆ, ಅಂತರ್ಜಲ ಕುಸಿತ ದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಪ್‌ಗಳ ಮುಖ್ಯ ಪೈಪ್‌ಗಳ ತೆರೆದು ಗ್ರಾಮಸ್ಥರಿಗೆ ನಿರು ಬಿಡು ವಂತಹ ತಿರ್ಮಾನ ಮಾಡಿದ್ದು, ದಿನಕ್ಕೆ ಒಂದು ಸಲ ಮಾತ್ರ  ನೀರು ಸರಬ ರಾಜು ಮಾಡಲಾಗುತ್ತಿದೆ. ವಿದ್ಯುತ್ ಕಡಿತಗೊಂಡರೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಮೀಪದ ತೋಟಗಳು ಅಥವಾ ಪಕ್ಕದ ಗ್ರಾಮಕ್ಕೆ ಹೋಗಿ ನೀರು ತರುವಂತಹ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮದ ನಾಗಮ್ಮ ಕೋಳೂರ.

ಗ್ರಾಮದಲ್ಲಿ ಕೂಲಿ ಕೆಲಸ ಮಾಡುವ ಕುಟುಂಬಗಳಿವೆ. 8 ತಿಂಗಳಿಂದ ಗ್ರಾಮ ಪಂಚಾಯಿತಿ ಆಡಳಿತ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಮಗಾರಿ ಕೆಲಸ ಆರಂಭಿಸಿಲ್ಲ. ಕೂಲಿಕಾರರು ಕೂಲಿ ಅರಸಿ ಕೆಲವು ಕುಟುಂಬಗಳು ದೂರದ ಮಂಗಳೂರು, ಬೆಂಗಳೂರಿಗೆ ಗುಳೆ ಹೋಗಿದ್ದಾರೆ. ಇನ್ನೂ ಕೆಲವು ಕುಟುಂಬಗಳ ಬದುಕು ಬೆಳೆ ಕೈಗೆ ಬರದೆ ದುಸ್ತರವಾಗಿದೆ. ಗ್ರಾಮಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪು ತ್ತಿಲ್ಲ. ಗ್ರಾಮದಿಂದ ಲಾಯದುಣಸಿ ಸಂಪರ್ಕ ರಸ್ತೆ ಡಾಂಬರೀಕರಣ ಇಲ್ಲದೆ ರಸ್ತೆ ಹದೆಗೆಟ್ಟಿದೆ ಎನ್ನುತ್ತಾರೆ ಗ್ರಾಮಸ್ಥರು.

2006– 2007ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿ ಕಳೆಪೆಯಾಗಿದ್ದು, ಈಗಾಗಲೇ ಮೇಲ್ಚಾವಣಿ ಬಿರುಕು ಬಿಟ್ಟಿದೆ. ಪ್ರತಿದಿನ ಇದೇ ಕೊಠಡಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿ ದ್ದಾರೆ. ಕಟ್ಟಡದ ಗೋಡೆ ಮತ್ತು ಮೇಲ್ಚಾವಣಿ ಕುಸಿಯುವ ಹಂತದಲ್ಲಿದೆ. ಅವಘಡ ಸಂಭವಿಸುವ ಅಧಿಕಾರಿಗಳು ನೂತನ ಕೊಠಡಿ ನಿರ್ಮಿಸಬೇಕು.

‘ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮತ್ತು ತಾಲ್ಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸ ಬೇಕು’ ಎಂದು ರುದ್ರಗೌಡ ಗೌಡ್ರ ಒತ್ತಾಯಿಸಿದರು.

–ಕೆ.ಶರಣಬಸವ ನವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.