ADVERTISEMENT

ಕನ್ನಡವೆಂದರೆ ಬಾಳೆಹಣ್ಣು, ಇಂಗ್ಲಿಷ್‌ ಸ್ಟ್ರಾಬೆರಿ

ಗ್ರಾಮೀಣ ಮಕ್ಕಳ ವ್ಯವಹಾರ ಭಾಷಾ ಕೌಶಲ

ಎಂ.ಜೆ.ಶ್ರೀನಿವಾಸ
Published 15 ಜನವರಿ 2018, 11:56 IST
Last Updated 15 ಜನವರಿ 2018, 11:56 IST

ಗಂಗಾವತಿ: ಸಮೀಪದ ವಿರೂಪಾಪುರ ಗಡ್ಡೆಯ ಮಕ್ಕಳಿಗೆ ಕನ್ನಡವೆಂದರೆ ಸುಲಿದ ಬಾಳೆಹಣ್ಣು. ಇಂಗ್ಲಿಷ್‌ ಎಂದರೆ ಸವಿ ಸ್ಟ್ರಾಬೆರಿ. ಹೀಗೆ ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾ ವ್ಯವಹಾರ ಕೌಶಲ ಬೆಳೆಸಿಕೊಂಡಿದ್ದಾರೆ. ಜೀವನೋಪಾಯದ ಜತೆಗೆ ಅವರಿಗೆ ಇದು ಪ್ರಾಯೋಗಿಕ ಪಾಠವೂ ಹೌದು.

ಆನೆಗೊಂದಿ ಹೋಬಳಿಯಲ್ಲಿ ವಿರೂಪಾಪುರಗಡ್ಡೆ ವಿದೇಶಿ ಪ್ರವಾಸಿಗರಿಗೆ ಮೋಜುಮಸ್ತಿಗೆ ಹೇಳಿ ಮಾಡಿಸಿದ ತಾಣ. ಈ ಗ್ರಾಮದಲ್ಲಿ ಮಕ್ಕಳು ಇಂಗ್ಲಿಷ್ ಮಾತನಾಡುವ ಪರಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಶಾಲೆಗೂ ಮುನ್ನ ಹಾಗೂ ಬಳಿಕದ ಅವಧಿಯಲ್ಲಿ ಇಲ್ಲಿನ ಮಕ್ಕಳು ಥೇಟ್ ವ್ಯಾಪಾರಿಗಳಂತೆ ಬದಲಾಗುತ್ತಾರೆ. ಕೈಯಲ್ಲಿ ಫ್ಲಾಸ್ಕ್ ಹಿಡಿದುಕೊಂಡು ಹೊರಟು ನಿಂತರೆ ನೂರಾರು ರೂಪಾಯಿ ಜೇಬಿಗಿಳಿಸಿಕೊಂಡು ಮನೆಗೆ ಮರಳುತ್ತಾರೆ.

ಪ್ರವಾಸಿಗರಿಗೆ ಇಲ್ಲಿನ ಮಕ್ಕಳು ಚಹಾ, ಕಾಫಿ, ಲೆಮನ್ ಟೀ, ಮಿಂಟ್ ಟೀ, ಗ್ರೀನ್ ಟೀ, ಡಿಕಾಕ್ಷನ್, ಬ್ಲ್ಯಾಕ್ ಟೀ, ಮಿಲ್ಕ್ ಲೆಸ್ ಟೀ (ಹಾಲುರಹಿತ ಚಹಾ), ಜಿಂಜಿರ್ ಟೀ ಹೀಗೆ ತರಹೇವಾರಿ ಬಿಸಿ ಪೇಯಗಳನ್ನು ಮಾರುತ್ತಾರೆ. ಅವರೊಂದಿಗಿನ ಒಡನಾಟದಿಂದ ಮಕ್ಕಳು ಇಂಗ್ಲಿಷ್‌ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.

ADVERTISEMENT

ಮಳೆಗಾಲ ಕಳೆದ ಕೂಡಲೇ ಎಂದರೆ ಸಾಕು ಈ ಗ್ರಾಮಕ್ಕೆ ಫ್ರಾನ್ಸ್, ಜರ್ಮನ್, ಇಸ್ರೇಲ್, ಇಟಲಿ, ಇಥಿಯೋಫಿಯಾ, ಹಾಂಕಾಂಗ್, ಜಪಾನ್ ಅಷ್ಟೆ ಏಕೆ ಡ್ರ್ಯಾಗನ್

ರಾಷ್ಟ್ರವಾದ ಚೀನಾದಂತಹ ನೂರಾರು ದೇಶದಿಂದ ಸಾವಿರಾರು ವಿದೇಶಿ ಪ್ರವಾಸಿಗರು ಇಲ್ಲಿಗೆ ಕಾಲಿಡುತ್ತಾರೆ. ಈ ವಿದೇಶಿಗರೊಂದಿಗೆ ಬೆರೆಯುವ ಮಕ್ಕಳು ಇಂಗ್ಲಿಷ್ ಜೊತೆಗೆ ಆಯಾ ವಿದೇಶಿಗರ ಭಾಷೆ ಕಲಿಯಲು ಯತ್ನಿಸುತ್ತಾರೆ.

ಭಾಷೆಯ ಸ್ವರೂಪ, ಅಕ್ಷರಜ್ಞಾನ, ಸ್ವರ, ವ್ಯಂಜನ, ಶಬ್ದ ಸಂಗ್ರಹದಂತ ಯಾವ ಪ್ರಾಥಮಿಕ ವ್ಯಾಕರಣವೂ ಮಾತನಾಡಲು ಬೇಕಿಲ್ಲ ಎಂಬುವುದನ್ನು ಇಲ್ಲಿನ ಮಕ್ಕಳು ತೋರಿಸಿದ್ದಾರೆ.

ಇಂಗ್ಲಿಷ್ ಮಾತ್ರವಲ್ಲ, ಹಿಂದಿ, ಫ್ರೆಂಚ್, ಲ್ಯಾಟಿನ್, ಅಮೆರಿಕನ್ ಇಂಗ್ಲಿಷ್ ಮೊದಲಾದ ಭಾಷೆ ಮಾತನಾಡುತ್ತಾರೆ.

‘ಅಲ್ಪಸ್ವಲ್ಪ ಇಂಗ್ಲಿಷ್ ಭಾಷೆಯನ್ನು ಶಾಲೆಯಲ್ಲಿ ಕಲಿಸುತ್ತಾರೆ. ಅದರ ಹೊರತಾಗಿಯೂ ನಾವು ಬೇರೆ ಭಾಷೆಯಲ್ಲಿ

ಮಾತನಾಡಲು ಯತ್ನಿಸುತ್ತೇವೆ. ಕೆಲಬಾರಿ ಆಂಗಿಕ ಭಾಷೆಯೂ ಸಂಪರ್ಕ ಸಾಧನವಾಗುತ್ತಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ನಯನ, ಶ್ರೀಕಾಂತ್, ಬಸವರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.