ADVERTISEMENT

ಆತಂಕದಲ್ಲಿ ಶಾಲಾ ವಿದ್ಯಾರ್ಥಿಗಳು

ಮೆಹಬೂಬ ಹುಸೇನ
Published 3 ಫೆಬ್ರುವರಿ 2018, 7:18 IST
Last Updated 3 ಫೆಬ್ರುವರಿ 2018, 7:18 IST
ಕನಕಗಿರಿ ಆದರ್ಶ ವಿದ್ಯಾಲಯದ ಶಾಲಾ ಕಟ್ಟಡಕ್ಕೆ ಹಾಕಿರುವ ಟೈಲ್ಸ್‌ಗಳು ಕಿತ್ತಿಕೊಂಡು ಹೋಗಿರುವುದು
ಕನಕಗಿರಿ ಆದರ್ಶ ವಿದ್ಯಾಲಯದ ಶಾಲಾ ಕಟ್ಟಡಕ್ಕೆ ಹಾಕಿರುವ ಟೈಲ್ಸ್‌ಗಳು ಕಿತ್ತಿಕೊಂಡು ಹೋಗಿರುವುದು   

ಕನಕಗಿರಿ: ಪಟ್ಟಣದ ಲಕ್ಷ್ಮಿದೇವಿ ಕೆರೆಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಿರುವ ಆದರ್ಶ ವಿದ್ಯಾಲಯದ ಶಾಲಾ ಕೊಠಡಿ ಗೋಡೆಗಳು ಬಿರುಕು ಬಿಟ್ಟಿದ್ದು ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರ ಅವಧಿಯಲ್ಲಿ ಸಚಿವರಾಗಿದ್ದ ಶಿವರಾಜ ತಂಗಡಗಿ ಪರಿಶ್ರಮದಿಂದ 2010–11ನೇ ಸಾಲಿನಲ್ಲಿ ಶಾಲೆ ಮಂಜೂರು ಆಗಿತ್ತು.

ಶಾಲಾ ಕೊಠಡಿ, ಶೌಚಾಲಯ ಸೇರಿದಂತೆ ಇತರ ಕಾಮಗಾರಿಗೆ ₹ 4.28 ಕೋಟಿ ಅನುದಾನದಲ್ಲಿ 28 ಶಾಲಾ ಕೊಠಡಿಯನ್ನು ನಿರ್ಮಿಸ ಲಾಗಿದ್ದು ಅವುಗಳು ತೀರ ಕಳಪೆ ಗುಣಮಟ್ಟದಲ್ಲಿವೆ. ಗೋಡೆ, ಫಿಲ್ಲರ್‌ ಗಳು ಬಿರುಕು ಬಿಟ್ಟಿವೆ. ಕಿಟಕಿ, ಬಾಗಿಲುಗಳು ಕಿತ್ತಿಕೊಂಡು ಹೋಗಿದ್ದು ಕಳಪೆ ಗುಣಮಟ್ಟದ ಸಾಮಗ್ರಿ ಬಳಕೆ ಮಾಡಿದ್ದಾರೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಾ. ದೇವರಾಜ ಮಂಗಳೂರು ದೂರಿದರು.

ADVERTISEMENT

ಬಿಎಸ್‌ಆರ್‌ ಕನಸ್ಟ್ರಕ್ಷನ್ ಎಂಬ ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು ಶ್ರೀಧರ ಎಂಬ ಉಪ ಗುತ್ತಿಗೆದಾರ ಈ ಕೆಲಸ ಮಾಡಿದ್ದಾರೆ. ಉತ್ತಮ ಸಿಮೆಂಟ್‌, ಮರಳು ಬಳಸಿಲ್ಲ. ಕ್ಯೂರಿಂಗ್‌ ಸಹ ಸರಿಯಾಗಿ ಮಾಡಿಲ್ಲ ಹೀಗಾಗಿ ಶಾಲಾ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ, ಶೌಚಾಲಯಕ್ಕೆ ಅಳವಡಿಸಿರುವ ಪೈಪ್‌ ಸಹ ಹಾಳಾಗಿವೆ ಎಂದು ಆರೋಪಿಸಿದರು.

ಶಾಲಾ ಕೊಠಡಿಗಳಿಗೆ ಹಾಕಿದ ಟೈಲ್ಸ್‌, ಬಾಗಿಲು, ಕಿಟಕಿ, ಗ್ಲಾಸ್‌ಗಳು ಕಿತ್ತಿಕೊಂಡು ನೆಲಕ್ಕೆ ಬಿದ್ದಿವೆ, ಅವು ಸಹ ತೀರ ಕಳಪೆ ಗುಣಮಟ್ಟದ ಸಾಮಗ್ರಿ ಎಂದು ಹೇಳಿದರು. ಕಳೆದ ವರ್ಷ ಜುಲೈ 24ರಂದು ಶಾಲೆಗೆ ಭೇಟಿ ನೀಡಿದ್ದ ಶಾಸಕ ಶಿವರಾಜ ತಂಗಡಗಿ ಅವರು ಕಳಪೆ ಕಾಮಗಾರಿ, ಕಿಟಕಿ, ಬಾಗಿಲುಗಳನ್ನು ಖುದ್ದಾಗಿ ನೋಡಿ ಗುತ್ತಿಗೆದಾರರ ವಿರುದ್ದ ಸಿಡಿಮಿಡಿಗೊಂಡಿದ್ದರು, ದೂರವಾಣಿಯಲ್ಲಿ ತರಾಟೆಗೆ ತೆಗೆದು ಕೊಂಡಿದ್ದ ಅವರು ವಾರದೊಳಗೆ ದುರಸ್ತಿ ಮಾಡುವಂತೆ ಸೂಚಿಸಿ ಆರು ತಿಂಗಳು ಗತಿಸಿದರು ಗುತ್ತಿಗೆದಾರ ಹಾಗೂ ಎಂಜಿನಿಯರ್ ಅವರು ಗಮನ ಹರಿಸಿಲ್ಲ ಎಂದು ಮುಖ್ಯ ಶಿಕ್ಷಕ ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‌‌ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಇಂಗ್ಲಿಷ್ ಶಿಕ್ಷಕರು ಇಲ್ಲ, ಪ್ರತಿ ವರ್ಷ ಎರವಲು ಸೇವೆಯ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಶಾಲಾ ಕೊಠಡಿಗಳ ಸ್ಥಿತಿ ನೋಡಿದರೆ ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತಿದೆ ಎಂದು ಪಾಲಕ ಪರಶುರಾಮ, ಬಸವರಾಜ, ವಿಶ್ವನಾಥ, ಮಂಜುನಾಥ ಆತಂಕ ವ್ಯಕ್ತಪಡಿಸಿದರು.

* * 

ಟೈಲ್ಸ್‌ ಜೋಡಿಸುವಲ್ಲಿ ಲೋಪವಾಗಿದೆ. ಕಿಡಕಿ, ಬಾಗಿಲು ಮುರಿದು ಬಿದ್ದ ಬಗ್ಗೆ ಮಾಹಿತಿ ಇದ್ದು ವಾರದಲ್ಲಿ ದುರಸ್ತಿ ಮಾಡಿಸಲಾಗುವುದು
ಶ್ರೀಧರ ಉಪ ಗುತ್ತಿಗೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.