ADVERTISEMENT

‘ತೋಟಗಾರಿಕೆ ಬೆಳೆಯಿಂದ ಅಧಿಕ ಲಾಭ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:58 IST
Last Updated 19 ಫೆಬ್ರುವರಿ 2018, 9:58 IST

ಕೊಪ್ಪಳ: ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ ಗಳಿಸಬಹುದಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಜಿಲ್ಲೆಯ ರೈತರು ಮುಂದಾಗುತ್ತಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್‌ ಹೇಳಿದರು.

ನಗರದ ತೋಟಗಾರಿಕಾ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ನಡೆದ ದ್ರಾಕ್ಷಿ ಮತ್ತು ದಾಳಿಂಬೆ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಾರಿಕೆ ಬೆಳೆಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಹಾಗಾಗಿ ಜಿಲ್ಲೆಯಲ್ಲಿ 800 ಹೆಕ್ಟೇರ್‌ ದ್ರಾಕ್ಷಿ ಮತ್ತು 1,500 ಹೆಕ್ಟೇರ್‌ ಪ್ರದೇಶದಲ್ಲಿ ದಾಳಿಂಬೆಯನ್ನು ರೈತರು ಬೆಳೆದಿದ್ದಾರೆ. ಅಲ್ಲದೆ ಜಿಲ್ಲೆಯ ತಂಬ್ರಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಾಳೆ ಬೆಳೆದಿದ್ದಾರೆ. ಇದಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ತೋಟಗಾರಿಕೆ ಇಲಾಖೆ ಮಾವು ಮೇಳ, ಮಧು ಮೇಳ, ಈಗ ದ್ರಾಕ್ಷಿ ಮತ್ತು ದಾಳಿಂಬೆ ಮೇಳಗಳನ್ನು ಆಯೋಜಿಸುವ ಮೂಲಕ ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಿರುವುದು ಅನುಕೂಲವಾಗಿದೆ.

ADVERTISEMENT

ನೇರವಾಗಿ ರೈತರೇ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಣ್ಣುಗಳು ದೊರೆಯುತ್ತವೆ. ಜಿಲ್ಲೆಯಲ್ಲಿ ಹಿಂದೆ ವಿರಳವಾಗಿ ಬೆಳೆಯಲಾಗುತ್ತಿದ್ದ ತೋಟಗಾರಿಕೆ ಬೆಳೆಗಳನ್ನು ಎಷ್ಟು ಪ್ರಮಾಣದಲ್ಲಿ ಬೆಳೆದಿದ್ದಾರೆ ಎಂದು ತಿಳಿಯುತ್ತಿರಲಿಲ್ಲ. ಆದರೆ ಪ್ರಸ್ತುತ ಸರ್ಕಾರ ಈ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿರುವುದರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡುತ್ತಿದೆ. ರೈತರಿಗೆ ಶಾಶ್ವತ ಮಾರುಕಟ್ಟೆ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುವುದು ಎಂದರು.

ಸಂಸದ ಸಂಗಣ್ಣ ಕರಡಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ, ರೈತರಿಗೆ ಮಾರುಕಟ್ಟೆ ಜ್ಞಾನ ಕಡಿಮೆ ಇರುತ್ತದೆ. ಮೇಳದ ಮೂಲಕ ಮಾರುಕಟ್ಟೆ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಕಾರ್ಯ. ಅಲ್ಲದೆ ಮೇಳದಲ್ಲಿ ಅನೇಕ ವಿಚಾರಗಳನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಇದರಿಂದ ಅವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ರೈತರಿಗೆ ಶಾಶ್ವತವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದರು.

ಕೃಷ್ಣಾ ಉಕ್ಕುಂದ ಮಾತನಾಡಿ, ಈ ಮೇಳ 5 ದಿನಗಳ ಕಾಲ ನಡೆಯುತ್ತದೆ. ಈಗಾಗಲೇ 12 ಸ್ಟಾಲ್‌ ಹಾಕಲಾಗಿದೆ.  ಮೇಳದ ಆವರಣದಲ್ಲಿ ಫೆ. 20ರಂದು ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಯ ಬೇಸಾಯ ತಂತ್ರಜ್ಞಾನದ ಕೈಪಿಡಿ ಬಿಡುಗಡೆಗೊಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.