ADVERTISEMENT

ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಿ

ಅಂತರ್ಜಾತಿ ವಿವಾಹಿತರ ಸಮಾವೇಶ; ಬಸವರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:11 IST
Last Updated 3 ಮಾರ್ಚ್ 2017, 6:11 IST

ಮಂಡ್ಯ: ಅಂತರ್ಜಾತಿ ವಿವಾಹಗಳಲ್ಲಿ ಸಮಸ್ಯೆ  ಹೆಚ್ಚಾಗುತ್ತಿದ್ದು, ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಹ ಸಂಚಾಲಕ ಯು. ಬಸವರಾಜು ಸಲಹೆ ನೀಡಿದರು.

ನಗರದಲ್ಲಿ ದಲಿತ ಹಕ್ಕುಗಳ ಸಮಿತಿ ಗುರುವಾರ ಏರ್ಪಡಿಸಿದ್ದ ಅಂತರ್ಜಾತಿ ವಿವಾಹಿತರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅಂತರ್ಜಾತಿ ವಿವಾಹವಾದಾಗ ಎದುರಾಗುವ ಸಮಸ್ಯೆ ನಿವಾರಿಸಲು ದೊಡ್ಡಮಟ್ಟದ ಆಂದೋಲನ ನಡೆಯ ಬೇಕು. ವಿವಾಹ ಆದವರು ಸಾಮಾಜಿಕ ಬಹಿಷ್ಕಾರದಿಂದ ನರಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಮತಾಂತರ ಶಕ್ತಿಗಳು ಮರ್ಯಾದೆ ಗೇಡು ಹತ್ಯೆಗೆ ದಾರಿ ಮಾಡಿಕೊಡುತ್ತಿವೆ. ಮತಾಂಧರು ದಾಳಿ ಮಾಡುತ್ತಿದ್ದಾರೆ.  ಪ್ರೇಮ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ಅವು ಜಾತಿ ಎಲ್ಲೆ ಮೀರಿ ನಿಲ್ಲುವಂತೆ ಮಾಡಬೇಕು ಎಂದರು.

ಬಸವಣ್ಣ ಸೇರಿದಂತೆ ಹಲವು ಸಮಾಜ ಸುಧಾರಕರು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಆ ನಿಟ್ಟಿನಲ್ಲಿ ಸಂಘ–ಸಂಸ್ಥೆಗಳೂ ಸಾಗಬೇಕು. ಸಾಧಕರ ಜಯಂತಿಗಳಲ್ಲಿ ಈ ಬಗ್ಗೆ ಚರ್ಚೆಗಳಾಗಬೇಕು ಎಂದು ಸಲಹೆ ನೀಡಿದರು.

ಅಂತರ್ಜಾತಿ ವಿವಾಹಿತರಿಗೆ ₹ 10 ಲಕ್ಷ ಪ್ರೋತ್ಸಾಹ ಧನ, 5 ಎಕರೆ ಕೃಷಿ ಜಮೀನು, ಹಿತ್ತಲು ಸಹಿತ ವಸತಿ ನೀಡಬೇಕು. ಕುಟುಂಬದ ಸದಸ್ಯರಿಗೆ ಶಿಕ್ಷಣ, ಉದ್ಯೋಗ, ಮೀಸಲಾತಿ ಹಾಗೂ ಖಾಸಗಿ ರಂಗದಲ್ಲೂ ಮೀಸಲಾತಿ ನೀಡಬೇಕು. ಮರ್ಯಾದೆಗೇಡು ಹತ್ಯೆಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಸಮಾವೇಶದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಆರ್. ಕೃಷ್ಣ, ಅಂತರ ಜಾತಿ ವಿವಾಹಿತರ ವಿಮೋಚನಾರಂಗದ ಕವಿತಾ ಜೈಕುಮಾರ್, ವನಜಾ, ಎನ್. ರಾಜೇಂದ್ರಸಿಂಗ್‌ಬಾಬು, ಅಂಬೂಜಿ, ಶಂಕರ್ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.