ADVERTISEMENT

ಉತ್ತಮ ಕೆಲಸ ಮಾಡುವಲ್ಲಿ ದೇವರಿದ್ದಾನೆ

ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗಾಣಿಗ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 6:09 IST
Last Updated 29 ಜನವರಿ 2015, 6:09 IST

ನಾಗಮಂಗಲ: ಯಾರು ಉತ್ತಮ ಕೆಲಸವನ್ನು ನೆಮ್ಮದಿಯಿಂದ ಮಾಡುವರೋ ಅವರು ಅಲ್ಲಿಯೇ ದೇವರನ್ನು ಕಾಣಬಹುದು ಎಂದು ಸಮಾಜ ಸೇವಕ ಶ್ರೀನಿವಾಸ್ ಗಾಣಿಗ ಅಭಿಪ್ರಾಯ ಪಟ್ಟರು.

ಪಟ್ಟಣದ ಪೌರಕಾರ್ಮಿಕರ ಕಾಲೊನಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಜ್ಯ ವ್ಯಾಪಿ ನಿರ್ಮಲ ಸಮಾಜ ಕಾರ್ಯಕ್ರಮದಲ್ಲಿ ಪಟ್ಟಣದ ಪೌರಕಾರ್ಮಿಕರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.

‘ಸರ್ಕಾರದಿಂದ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ಸಮೀಪದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯೆ ಕೊಡಿಸಿ. ನಿಮ್ಮ ಕಾಲೊನಿಯಲ್ಲಿ ವಾಸ ಮಾಡುವ ಕೆಲವರು ಮದ್ಯಪಾನ ಮಾಡಿ ಸಾಕಷ್ಟು ಹಣವನ್ನು ದುರುಪಯೋಗ ಮಾಡುತ್ತಿದ್ದೀರಾ. ಇದು ನಿಮ್ಮ ಕುಟುಂಬಗಳು ಸಂಕಷ್ಟದಲ್ಲಿರುವುದಕ್ಕೆ ಕಾರಣ. ಆದ್ದರಿಂದ ನೀವು ಆರ್ಥಿಕವಾಗಿ ಸಬಲರಾಗಬೇಕಾದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾರ್ಗದರ್ಶನ ಪಡೆದುಕೊಳ್ಳಿ. ಈ ಸಂಸ್ಥೆಯು ನೀವು ಮಾಡಿದ ಸೇವೆಯನ್ನು ಗುರುತಿಸಿ ನಿಮಗೆ ಸನ್ಮಾನಿಸಿರುವುದು ಸಂತೋಷದ ವಿಷಯ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಸಂಯೋಜಕಿ ಹೇಮಲತಾ ಮಾತನಾಡಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ ಮಾರ್ಗದರ್ಶನದಂತೆ ಕೇವಲ ಸಂಘವನ್ನು ಮಾಡುವುದು ಉದ್ದೇಶವಲ್ಲ. ಸಂಘ ಮಾಡುವುದರ ಮೂಲಕ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು.

ಈಗಾಗಲೇ ತಾಲ್ಲೂಕಿನ 5 ಹೋಬಳಿಯಲ್ಲಿ ಕೆಲವು ಗ್ರಾಮಗಳಲ್ಲಿ ನಮ್ಮ ಸಂಘದ ವತಿಯಿಂದ ದೇವಾಲಯಗಳ ಆವರಣದಲ್ಲಿ ಹಾಗೂ ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ತಂದೆ ತಾಯಿಗಳು ಶಿಸ್ತಿನಿಂದ ಇದ್ದರೆ ಮಕ್ಕಳು ಶಿಸ್ತನ್ನು ಕಲಿಯಲು ಸಾಧ್ಯ. ಮೊದಲು ನಿಮ್ಮ ಕಾಲೊನಿಯಲ್ಲಿ ಯಾರು ಮದ್ಯಪಾನ ಮಾಡುತ್ತಿದ್ದೀರಾ ಅಂತಹವರು ಮೊದಲು ಮದ್ಯಪಾನವನ್ನು ನಿಲ್ಲಿಸಿ. ಈ ಪಟ್ಟಣದಲ್ಲಿ ನಿಮ್ಮ ಕಾಲೊನಿ ಮಾದರಿಯಾಗಲಿ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಅನ್ಸರ್ ಪಾಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಗೌರಮ್ಮ, ಕೆ. ನಾಗ, ಆರ್. ನಾಗ ಅವರನ್ನು ಸನ್ಮಾನಿಸಲಾಯಿತು.

ಪ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮೀ ಕುಮಾರ್, ಒಕ್ಕೂಟದ ಅಧ್ಯಕ್ಷೆ ಸರಸ್ವತಿ, ಕಂದಾಯ ನಿರೀಕ್ಷಕ ಶಿವಬಸವೇಗೌಡ, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮೀ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.