ADVERTISEMENT

ಕಬಡ್ಡಿ: ‘ಚಿನ್ನ’ದ ಹುಡುಗಿ ರೂಪಾ!

ಶ್ರೀರಂಗಪಟ್ಟಣ ತಾಲ್ಲೂಕು ಕೂಡಲಕುಪ್ಪೆ ಗ್ರಾಮದ ಕ್ರೀಡಾ ಪ್ರತಿಭೆ

ಗಣಂಗೂರು ನಂಜೇಗೌಡ
Published 16 ಫೆಬ್ರುವರಿ 2017, 8:58 IST
Last Updated 16 ಫೆಬ್ರುವರಿ 2017, 8:58 IST
ಶ್ರೀರಂಗಪಟ್ಟಣ: ಸಾಕಷ್ಟು ದೈಹಿಕ ಶ್ರಮ ಬಯಸುವ ಕಬಡ್ಡಿ ಕ್ರೀಡೆಯಲ್ಲಿ  ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ರೂಪಾ ಈ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.
 
ಹತ್ತಾರು ಬಾರಿ ಜಿಲ್ಲಾಮಟ್ಟದ ಕಬಡ್ಡಿ ಟೂರ್ನಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದಾರೆ. 7 ಬಾರಿ ರಾಜ್ಯಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಮಂಡ್ಯ, ತುಮಕೂರು, ಉಡುಪಿ ಇತರ ಕಡೆಗಳಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಟೂರ್ನಿಗಳಲ್ಲಿ ಆಟವಾಡಿ ಗಮನ ಸೆಳೆದಿದ್ದಾರೆ. 
 
2013ರಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪೈಕಾ ಕ್ರೀಡಾಕೂಟದ ಕಬಡ್ಡಿಯಲ್ಲಿ ಆಲ್‌ರೌಂಡ್‌ ಆಟವಾಡಿ ಚಿನ್ನದ ಪದಕ ಗಳಿಸಿದ್ದಾರೆ.
2007ರಲ್ಲಿ ಹರಿಯಾಣ, 2010ರಲ್ಲಿ ತಮಿಳುನಾಡು ಹಾಗೂ 2011ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಗಳಲ್ಲಿ ಕೂಡ ಮಿಂಚಿನ ಆಟವಾಡಿ ‘ಸೈ’ ಎನಿಸಿಕೊಂಡಿದ್ದಾರೆ.
 
2009ರಲ್ಲಿ ಮಂಡ್ಯದಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಟೂರ್ನಿಯಲ್ಲಿ ಮೈಸೂರು ವಿವಿ ತಂಡವನ್ನು ಗೆಲ್ಲಿಸಿದ ಹೆಗ್ಗಳಿಕೆ ರೂಪಾ ಅವರದ್ದು. ಸದ್ಯ ಮೈಸೂರಿನಲ್ಲಿ ಎಂ.ಪಿಎಡ್‌ ಶಿಕ್ಷಣ ಪಡೆಯುತ್ತಿರುವ ರೂಪಾ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕ್ರೀಡಾಪಟುಗಳನ್ನು ತಯಾರು ಮಾಡಬೇಕು ಎಂಬ ತೀವ್ರವಾದ ಹಂಬಲ ಹೊಂದಿದ್ದಾರೆ.
 
‘ನನಗೆ ಚಿಕ್ಕಂದಿನಿಂದಲೂ ಕಬಡ್ಡಿ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ನಮ್ಮ ಊರಿನವರೇ ಆದ ಹಿರಿಯ ಕಬಡ್ಡಿ ಆಟಗಾರ ಮಹದೇವು ಅವರು ನನ್ನ ಆಸಕ್ತಿಗೆ ನೀರೆರೆದು ಪ್ರೋತ್ಸಾಹಿಸಿದರು. ಅಗತ್ಯ ತರಬೇತಿ ನೀಡಿ ಟೂರ್ನಿ ಗಳಿಗೆ ಸಜ್ಜುಗೊಳಿಸಿದರು.
 
ಬೆಂಗಳೂರಿನ ಕಬಡ್ಡಿ ತರಬೇತುದಾರ ಮಂಜು ಅವರಿಂದಲೂ ಸಾಕಷ್ಟು ತರಬೇತಿ ಪಡೆದಿದ್ದೇನೆ. ತಂದೆ ಜಯರಾಮು ಹಾಗೂ ತಾಯಿ ಲಲಿತಾ ಅವರ ಸಹಕಾರದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಟೂರ್ನಿ ಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು’ ಎನ್ನುವುದು ರೂಪಾ ಅವರ ಮಾತು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.