ADVERTISEMENT

ಕಬ್ಬು ಕೊರತೆ: ಕಂಗೆಟ್ಟು ನಿಂತ ಆಲೆಮನೆಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:29 IST
Last Updated 22 ಜುಲೈ 2017, 9:29 IST
ಸ್ಥಗಿತಗೊಂಡಿರುವ ಆಲೆಮನೆಗಳು
ಸ್ಥಗಿತಗೊಂಡಿರುವ ಆಲೆಮನೆಗಳು   

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ (ಪಿಎಸ್‌ಎಸ್‌ಕೆ) ಸಡ್ಡು ಹೊಡೆದು ಕಾರ್ಖಾನೆ ಅರೆಯುವಷ್ಟೇ ಪ್ರಮಾಣದ ಕಬ್ಬು ಅರೆಯುತ್ತ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದ ತಾಲ್ಲೂಕಿನ ಸುಮಾರು 250ಕ್ಕೂ ಹೆಚ್ಚು ಆಲೆಮನೆಗಳು ಕಬ್ಬಿನ ಕೊರತೆಯಿಂದಾಗಿ ಕಂಗೆಟ್ಟು ನಿಂತಿವೆ.

ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ, ಚಿಕ್ಕಬ್ಯಾಡರಹಳ್ಳಿ ಗ್ರಾಮಗಳ ಭಾಗದಲ್ಲಿ ನೂರಕ್ಕೂ ಹೆಚ್ಚು ಆಲೆಮನೆಗಳಿದ್ದು, ಕೆನ್ನಾಳು, ಚಿಕ್ಕಾಡೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ 250ಕ್ಕೂ ಹೆಚ್ಚು ಆಲೆಮನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿವೆ. ನೂರಾರು ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕೋಟ್ಯಂತರ ರೂಪಾಯಿಗಳ ವಹಿವಾಟು ಸ್ತಬ್ಧಗೊಂಡಿದೆ.

ಅಲ್ಲೊಂದು, ಇಲ್ಲೊಂದು ಆಲೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಕಬ್ಬಿಗೆ ಉತ್ತಮ ಬೆಲೆ ಸಿಕ್ಕಿದರೂ ನಿರ್ದಿಷ್ಟ ಪ್ರಮಾಣದ ಕಬ್ಬು ದೊರೆಯುತ್ತಿಲ್ಲ.ಕೆಆರ್ಎಸ್‌ ಪೂರ್ಣ ಭರ್ತಿಯಾಗದೆ, ತಮಿಳುನಾಡಿಗೆ ನೀರು ಹರಿಸಿದ್ದರಿಂದ ನೀರಿನ ಕೊರತೆ ಉಂಟಾಯಿತು. ಈ ಕಾರಣದಿಂದ ಈ ಭಾಗದ ರೈತರು ಕಬ್ಬು ಬಿತ್ತನೆಯನ್ನೇ ಮಾಡಲಿಲ್ಲ. ಕೊಳವೆ ಬಾವಿ ನೀರಿನಿಂದ (ಪಂಪ್‌ಸೆಟ್‌) ಒಂದಿಷ್ಟು ಕಬ್ಬನ್ನು ಬೆಳೆಯಲಾಗಿದೆ.

ADVERTISEMENT

ಮಳೆ ಬೀಳದೆ ಅಂತರ್ಜಲ ಕೂಡ ಕುಸಿದಿದೆ. ಇದರಿಂದ ಕೊಳವೆ ಬಾವಿಯಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಈ ಎಲ್ಲ ಕಾರಣಗಳಿಂದಾಗಿ ರೈತರು ಕಬ್ಬು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ.  ಒಂದು ಆಲೆಮನೆಯಲ್ಲಿ ಕನಿಷ್ಠ 10 ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕನಿಷ್ಠ 200 ಆಲೆಮನೆಗಳಿಂದ 2,000ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ನಿತ್ಯ ಸುಮಾರು ₹ 8ರಿಂದ ₹ 10 ಲಕ್ಷ ವಹಿವಾಟು ನಿಂತುಹೋಗಿದೆ. ರೈತರು, ಕೂಲಿಕಾರ್ಮಿಕರು, ಆಲೆಮನೆ ಕೆಲಸಗಾರರು, ವಾಹನಗಳ ಮಾಲೀಕರು, ಚಾಲಕರು, ಕೂಲಿಕಾರರಿಗೆ ಕೆಲಸವಿಲ್ಲದಂತಾಗಿದೆ.

ಪ್ರಸ್ತುತ ಟನ್‌ ಕಬ್ಬಿಗೆ ₹ 2,500 ಬೆಲೆ ಇದ್ದು, ಕಬ್ಬು ಕಡಿಯುವ ಕೂಲಿ, ಸಾಗಣೆ ವೆಚ್ಚ ಸೇರಿ ಟನ್‌ ಕಬ್ಬಿಗೆ ₹ 3,000 ಆಗುತ್ತದೆ. ಬೆಲ್ಲದ ಧಾರಣೆ ಸಹ ಇಳಿದಿದೆ. ಕ್ವಿಂಟಲ್ ಬೆಲ್ಲ ₹ 3,500 ನಡೆಯುತ್ತಿದೆ. ಉತ್ತಮ ಇಳುವರಿ ಹೊಂದಿರುವ ಒಂದು ಟನ್‌ ಕಬ್ಬು ಅರೆದರೆ ಒಂದು ಕ್ವಿಂಟಲ್‌ ಬೆಲ್ಲ ತಯಾರಿಸಬಹುದು. ಇಳುವರಿ ಕಡಿಮೆಯಾದರೆ 80ರಿಂದ 90 ಕೆ.ಜಿ. ಬೆಲ್ಲ ಸಿಗುತ್ತದೆ. ಇಳುವರಿಯ ಏರಿಳಿತಗಳಲ್ಲಿ ನಲುಗಿಹೋಗಿರುವ ಆಲೆಮನೆಯ ಮಾಲೀಕರಿಗೆ ಬೆಲ್ಲ ಒಮ್ಮೊಮ್ಮೆ ಕಹಿಯಾಗುವುದೂ ಉಂಟು.

ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ, ಚಿಕ್ಕಬ್ಯಾಡರಹಳ್ಳಿ ಸೇರಿದಂತೆ ಆಲೆಮನೆಗಳು ಹೆಚ್ಚಾಗಿರುವ ಗ್ರಾಮಗಳಲ್ಲಿ ಉತ್ತರ ಪ್ರದೇಶ, ಬಿಹಾರ ರಾಜ್ಯದ ಕೂಲಿ ಕಾರ್ಮಿಕರು ಬೆಲ್ಲ ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಒಂದು ಕ್ವಿಂಟಲ್ ಬೆಲ್ಲ ತಯಾರಿಸಲು ಕೂಲಿಕಾರ್ಮಿಕರಿಗೆ ಕನಿಷ್ಠ ₹ 320 ನೀಡಬೇಕಿದೆ. ನಿತ್ಯ 10 ಕ್ವಿಂಟಲ್‌ ಬೆಲ್ಲ ತಯಾರಾದರೆ ₹ 3,200ನ್ನು ಕೂಲಿಕಾರ್ಮಿಕರಿಗೆ ಕೊಡಬೇಕಾಗುತ್ತದೆ.

ಅಲ್ಲದೇ ಬೆಲ್ಲ ತಯಾರಿಸಲು ಕಬ್ಬಿನ ಜತೆ ಬೇಕಾದ ಇತರ ರಾಸಾಯನಿಕಗಳು, ಉರುವಲುಗಳನ್ನು ಮಾಲಿಕರೇ ಖರೀದಿಸಿಕೊಡಬೇಕಾಗುತ್ತದೆ. ಬಂಡವಾಳ ಹೂಡಿದರೂ ಲಾಭದ ನಿರೀಕ್ಷೆ ಕಷ್ಟ’ ಎನ್ನುತ್ತಾರೆ ಆಲೆಮನೆ ಮುಖಂಡ ಜವರೇಗೌಡ. ಒಟ್ಟಾರೆ ಆಲೆಮನೆಯ ಉದ್ಯಮ ಹಾವು ಏಣಿ ಆಟದಂತೆ ನಡೆಯುತ್ತಿದೆ. ಈ ಬಾರಿ ಬೆಲ್ಲ ಸಿಹಿಗಿಂತ ಕಹಿ ಉಣಿಸಿದ್ದೆ ಹೆಚ್ಚು ಎನ್ನಬಹುದು.

ಅಂಕಿ–ಅಂಶ
2,000ಕ್ಕೂ ಹೆಚ್ಚು ಕೂಲಿಕಾರ್ಮಿಕರಿಗೆ ಕೆಲಸವಿಲ್ಲ

₹10ಲಕ್ಷ  ನಿತ್ಯದ ವಹಿವಾಟು ಸ್ಥಗಿತ

250 ಆಲೆಮನೆಗಳು ಸ್ಥಗಿತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.