ADVERTISEMENT

‘ಕಾವೇರಿ ಮಹಾ ಪುಷ್ಕರ’ಕ್ಕೆ ಹರಿದು ಬಂದ ಜನ ಸಾಗರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 8:49 IST
Last Updated 13 ಸೆಪ್ಟೆಂಬರ್ 2017, 8:49 IST
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಆರಂಭವಾದ 12 ದಿನಗಳ ‘ದಕ್ಷಿಣ ಭಾಗೀರಥಿ ಕಾವೇರಿ ಮಹಾ ಪುಷ್ಕರ ಮೇಳ’ದ ಮೊದಲ ದಿನ ಕಾವೇರಿ ನದಿ ತಟದಲ್ಲಿ ಅಪಾರ ಭಕ್ತರು ಸೇರಿದ್ದರು
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಆರಂಭವಾದ 12 ದಿನಗಳ ‘ದಕ್ಷಿಣ ಭಾಗೀರಥಿ ಕಾವೇರಿ ಮಹಾ ಪುಷ್ಕರ ಮೇಳ’ದ ಮೊದಲ ದಿನ ಕಾವೇರಿ ನದಿ ತಟದಲ್ಲಿ ಅಪಾರ ಭಕ್ತರು ಸೇರಿದ್ದರು   

ಶ್ರೀರಂಗಪಟ್ಟಣ: ಇಲ್ಲಿನ ಕಾವೇರಿ ನದಿ ತಟದಲ್ಲಿ 12 ದಿನಗಳ ‘ದಕ್ಷಿಣ ಭಾಗೀರಥಿ ಕಾವೇರಿ ಪುಷ್ಕರ ಮಹಾ ಮೇಳ’ ಮಂಗಳವಾರ ಆರಂಭವಾಯಿತು. ಗುರುವು ದ್ವಾದಶ ರಾಶಿಗಳನ್ನು ಪ್ರವೇಶಿಸುವ ಪರ್ವ ಕಾಲದಲ್ಲಿ (ಬೆಳಿಗ್ಗೆ 7.20) ವಿವಿಧೆಡೆಗಳಿಂದ ಬಂದಿದ್ದ ಧಾರ್ಮಿಕ ಮುಖಂಡರು ಮೇಳಕ್ಕೆ ಚಾಲನೆ ನೀಡಿದರು.

ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ, ಮೈಸೂರಿನ ಬ್ರಾಹ್ಮಣ ಸಂಘ, ಅಭಿನವ ಭಾರತ್‌ ಮತ್ತು ಸಿಂಹಭೂಮಿ ಸಂಘಟನೆಗಳ ಜತೆಗೆ ಆಂಧ್ರಪ್ರದೇಶದ ನಂದಮೂರಿ ಬಸವ ತಾರಕ ರಾಮರಾವ್‌ ಸೇವಾ ಟ್ರಸ್ಟ್‌ ಈ ಮೇಳ ಆಯೋಜಿಸಿದ್ದು, ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶದ, ತೆಲಂಗಾಣ, ಕೇರಳ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.

ಗಂಗಾ ನಂದಿ ಮತ್ತು ತಲಕಾವೇರಿಯಿಂದ ತಂದ ಪವಿತ್ರ ಜಲದ ಕಳಶಗಳನ್ನು ನದಿಯ ತಟದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪೂರಿ ಜಗನ್ನಾಥ ಪೀಠದ ಶಂಕರ ಭಾರತಿ ಸ್ವಾಮೀಜಿ, ಬೆಂಗಳೂರಿನ ಅವಿಚ್ಛಿನ್ನ ಕೂಡಲಿ ಸಂಸ್ಥಾನ ಮಠದ ಸ್ವಾಮೀಜಿ, ಹೈದರಾಬಾದ್‌ ನ ಚಿನ್ನಜೀಯರ್‌ ಸ್ವಾಮೀಜಿ, ಜ್ಯೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ನದಿಗೆ ಬಾಗಿನ ಅರ್ಪಿಸಲಾಯಿತು.

ADVERTISEMENT

ಗಣಹೋಮ, ಗುರು ಹೋಮ, ಕುಂಭೇಶ್ವರ ಪೂಜೆ, ಕುಂಭ ಸ್ನಾನ ಮೊದಲಾದವು ಜರುಗಿದವು. ಪ್ರತಿ ದಿನ ಪ್ರದೋಷ ಕಾಲದಲ್ಲಿ ಕಾವೇರಿ ಮಹಾ ಆರತಿ, ಧಾರ್ಮಿಕ ಮುಖಂಡರಿಂದ ಪ್ರವಚನ ನಡೆಯಲಿದ್ದು, ಕಮ್ಮವಾರಿ ಸಂಘ 12 ದಿನಗಳೂ ಅನ್ನದಾನ ಏರ್ಪಡಿಸಿದೆ.

‘ಪಿತೃ ದೇವತೆಗಳ ಆತ್ಮ ಶಾಂತಿಗಾಗಿ ಪುಷ್ಕರ ನಡೆಯಬೇಕು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಪ್ರತಿ 12 ವರ್ಷಗಳಿಗೆ ಒಮ್ಮೆ ಮಹಾ ಪುಷ್ಕರ ಜರುಗುತ್ತದೆ. 2029ಕ್ಕೆ ಭೀಮಾ ಪುಷ್ಕರ ನಡೆಯಲಿದೆ’ ಎಂದು ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.