ADVERTISEMENT

ಕುಷ್ಠರೋಗಿಗಳೂ ಮನುಷ್ಯರೇ

ರೋಗದ ಅರಿವು ಮೂಡಿಸಿ l ಅವರಿಗೂ ಬದುಕುವ ಹಕ್ಕಿದೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:19 IST
Last Updated 31 ಜನವರಿ 2017, 7:19 IST
ಮಂಡ್ಯ ನಗರದ ಜಿಲ್ಲಾ ತರಬೇತಿ ಕೆಂದ್ರದಲ್ಲಿ ಸೋಮವಾರ ನಡೆದ ‘ಸ್ಪರ್ಶ್‌ ಕುಷ್ಠ ಅರಿವು ಅಂದೋಲನ’ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಮಾತನಾಡಿದರು
ಮಂಡ್ಯ ನಗರದ ಜಿಲ್ಲಾ ತರಬೇತಿ ಕೆಂದ್ರದಲ್ಲಿ ಸೋಮವಾರ ನಡೆದ ‘ಸ್ಪರ್ಶ್‌ ಕುಷ್ಠ ಅರಿವು ಅಂದೋಲನ’ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಮಾತನಾಡಿದರು   

ಮಂಡ್ಯ: ‘ಕುಷ್ಠ ರೋಗಿಗಳೂ ಮನುಷ್ಯರು ಎಂಬ ಭಾವನೆ ಮೂಡಿಸುವ ಕೆಲಸ ಸಮಾಜದಲ್ಲಿ ಆಗಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಸಲಹೆ ಮಾಡಿದರು.

ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮತ್ತು ಜಿಲ್ಲಾ ಆರೋಗ್ಯ ಘಟಕದ ಸಂಘ (ಕುಷ್ಠರೋಗ ವಿಭಾಗ)ದ ವತಿಯಿಂದ ಸೋಮವಾರ ನಡೆದ ‘ಸ್ಪರ್ಶ್‌ ಕುಷ್ಠ ಅರಿವು ಅಂದೋಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.

ಹಿಂದೆ ಕುಷ್ಠ ರೋಗಿಗಳನ್ನು ಊರಿನಿಂದಲೇ ಹೊರ ಹಾಕುತ್ತಿದ್ದರು. ಜತೆಗೆ ನಿಕೃಷ್ಠವಾಗಿಯೂ ಕಾಣಲಾಗುತ್ತಿತ್ತು. ಅದು ಈಗಲೂ ಮುಂದುವರೆದಿರುವುದು ದುರಂತ. ಕುಷ್ಠ ರೋಗಿಗಳನ್ನು ಹೊರ ಹಾಕಿದರೆ ಕಾನೂನಿನ ರೀತಿ ಅಪರಾಧ ಎಂಬುದನ್ನು ತಿಳಿಸಿಕೊಡುವ ಅವಶ್ಯಕತೆ ಇದೆ ಎಂದು ಸಲಹೆ ಮಾಡಿದರು.

ಕುಷ್ಠ ರೋಗದ ಕಾರಣಗಳಿಂದ ಎಷ್ಟೋ ಜನರು ವಿವಾಹ ವಿಚ್ಛೇದನಾ ಪಡೆದಿದ್ದಾರೆ. ಆದರೆ ವಾಸಿಯಾಗುವ ಕಾಯಿಲೆಗಳಿಗೆ ಯಾವುದೇ ವಿಚ್ಛೇದನಾ ನೀಡಲು ಕಾನೂನಿನಡಿ ಅವಕಾಶವಿಲ್ಲ. ವಾಸಿಯಾಗದ ಗಂಭೀರ ಕಾಯಿಲೆಗಳಿಗೆ ಮಾತ್ರ ವಿಚ್ಛೇದನಾ ಪಡೆಯಲು ಸಾಧ್ಯ ಎಂದು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ , ಸಮಾಜದಲ್ಲಿ ಕುಷ್ಠ ರೋಗದ ಬಗ್ಗೆ ತಪ್ಪು ಕಲ್ಪನೆಯಿದೆ. ಅದನ್ನು ಹೋಗಲಾಡಿಸಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಇದಕ್ಕೂ ಮುನ್ನ ನಗರದ ಸರ್ ಎಂ.ವಿ. ಪ್ರತಿಮೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿವರೆಗೂ ನಡೆದ ಕುಷ್ಠರೋಗದ ಬಗ್ಗೆ ಜಾಗೃತಿ ಜಾಥಾದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ನಾಗರಾಜು, ಜಿಲ್ಲಾ ಕುಟುಂಬ ರೋಗ ನಿರೋಧಕ ಅಧಿಕಾರಿ ಡಾ.ಕೆ.ಪಿ. ಅಶ್ವಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ. ಶಶಿಧರ್‌ ಬಸವರಾಜ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಿ. ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.