ADVERTISEMENT

ಜನಶ್ರೀ ವಿಮೆ ಮಾಡಿಸಲು ಹಾಲು ಉತ್ಪಾದಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:33 IST
Last Updated 22 ಜುಲೈ 2017, 9:33 IST

ಶ್ರೀರಂಗಪಟ್ಟಣ: ಹಾಲು ಉತ್ಪಾದಕರು ಜನಶ್ರೀ ವಿಮೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನ್‌ಮುಲ್‌ ನಿರ್ದೇಶಕ ಬಿ. ಬೋರೇಗೌಡ ಸಲಹೆ ನೀಡಿದರು.
ಪಟ್ಟಣದ ಮನ್‌ಮುಲ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೃತಪಟ್ಟ ರಾಸುಗಳ ಮಾಲೀಕರಿಗೆ ವಿಮೆ ಮೊತ್ತದ ಪರಿಹಾರ ಧನದ ಚೆಕ್‌ ವಿತರಿಸಿ ಅವರು ಮಾತನಾಡಿದರು.

‘ಹಾಲು ಸರಬರಾಜುದಾರರಿಗೆ ₹ 54 ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ₹ 137 ವಾರ್ಷಿಕ ವಿಮಾ ಕಂತು ನಿಗದಿ ಮಾಡಲಾಗಿದೆ’ ಎಂದರು.
ಹಾಲು ಉತ್ಪಾದಕರು ಮತ್ತು ಸಂಘದ ಸದಸ್ಯರ ಇಬ್ಬರು ಮಕ್ಕಳಿಗೆ ಮಂಡ್ಯ ಹಾಲು ಒಕ್ಕೂಟದಿಂದ ವಿದ್ಯಾರ್ಥಿ ವೇತನವನ್ನೂ ನೀಡಲಾಗುವುದು ಎಂದು ತಿಳಿಸಿದರು.

ಮನ್‌ಮುಲ್‌ ಉಪ ವ್ಯವಸ್ಥಾಪಕ ಡಾ.ಅಕ್ಕಲಪ್ಪರೆಡ್ಡಿ ಮಾತನಾಡಿ, ‘ತಾಲ್ಲೂಕಿನಲ್ಲಿ 67 ಎಂಪಿಸಿಎಸ್‌ಗಳಿದ್ದು 4,100 ಹಸುಗಳಿಗೆ ವಿಮೆ ಮಾಡಿಸಲಾಗಿದೆ. ಕಂತಿನ ಶೇ70ರಷ್ಟು ಹಣವನ್ನು ಹಾಲು ಒಕ್ಕೂಟ ಹಾಗೂ ಶೇ 30ರಷ್ಟು ಹಣವನ್ನು ಹಾಲು ಉತ್ಪಾದಕರು ಭರಿಸಲಿದ್ದಾರೆ’ ಎಂದರು.

ADVERTISEMENT

ತಾಲ್ಲೂಕಿನ ಎಂ.ಶೆಟ್ಟಹಳ್ಳಿಯ ಸತೀಶ್ ಮತ್ತು ಬಲ್ಲೇನಹಳ್ಳಿಯ ಬಿ. ಮಂಜುನಾಥ್‌ ಅವರಿಗೆ ತಲಾ ₹ 40 ಸಾವಿರ ಹಾಗೂ ಹುಲಿಕೆರೆಯ ಮಹೇಶ್‌ ಮತ್ತು ಚಿನ್ನೇನಹಳ್ಳಿಯ ಸವಿತಾ ಅವರಿಗೆ ತಲಾ ₹ 30 ಸಾವಿರ ವಿಮಾ ಮೊತ್ತದ ಚೆಕ್‌ ವಿತರಿಸಲಾಯಿತು. ವಿಸ್ತರಣಾಧಿಕಾರಿ ಮಂಜುನಾಥ್‌, ಡಾ.ತ್ರಿವೇಣಿ, ಉಷಾ ಈ  ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.