ADVERTISEMENT

ಜಿ.ಪಂಗೆ ವಿದೇಶಿ ಪ್ರತಿನಿಧಿಗಳ ಭೇಟಿ

ಜಿಲ್ಲೆಯ ವಿವಿಧೆಡೆ ಪ್ರವಾಸ * ಪಂಚಾಯಿತಿ ಯೋಜನೆಗಳ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:15 IST
Last Updated 3 ಮಾರ್ಚ್ 2017, 6:15 IST
ಮಂಡ್ಯ ಜಿಲ್ಲಾ ಪಂಚಾಯಿತಿಗೆ ಗುರುವಾರ ಭೇಟಿ ನೀಡಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು
ಮಂಡ್ಯ ಜಿಲ್ಲಾ ಪಂಚಾಯಿತಿಗೆ ಗುರುವಾರ ಭೇಟಿ ನೀಡಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು   

ಮಂಡ್ಯ: ಪಂಚಾಯಿತಿಗಳಲ್ಲಿನ ವಿವಿಧ ಯೋಜನೆ ಬಗ್ಗೆ ತಿಳಿದುಕೊಳ್ಳಲು ವಿವಿಧ ರಾಷ್ಟ್ರಗಳ ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಗುರುವಾರ ಮಂಡ್ಯ ಜಿಲ್ಲಾ ಪಂಚಾಯಿತಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರೂರಲ್‌ ಡೆವಲಪ್‌ಮೆಂಟ್‌ ಮತ್ತು ಪಂಚಾಯತ್‌ ರಾಜ್‌(ಎನ್‌ಐಆರ್‌ ಅಂಡ್‌ ಪಿಆರ್‌) ವತಿಯಿಂದ ಹೈದರಾ ಬಾದ್‌ನಲ್ಲಿ ನಡೆಯುತ್ತಿರುವ ‘ಯೋಜನೆ ತಯಾರಿ ಮತ್ತು ಬಡತನ ನಿರ್ಮೂಲನೆ, ನಿರಂತರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ’ದ ಬಗ್ಗೆ ಜಿಲ್ಲೆಯಲ್ಲಿ ಕ್ಷೇತ್ರ ವೀಕ್ಷಣೆ ಮಾಡಿ ಮಾಹಿತಿ ಪಡೆದರು.

ಇಂಡೊನೇಷಿಯಾ, ಕೀನ್ಯಾ, ಸ್ವಿಟ್ಜರ್‌ಲ್ಯಾಂಡ್‌, ಶ್ರೀಲಂಕಾ, ಬಾಂಗ್ಲಾ ದೇಶ, ಚಿಲಿ, ನೇಪಾಳ, ಸೂಡಾನ್‌, ಉಗಾಂಡಾ ಸೇರಿದಂತೆ 25 ರಾಷ್ಟ್ರಗಳ ಪ್ರತಿನಿಧಿಗಳು ಜಿಲ್ಲೆಯ ವಿವಿಧೆಡೆ ಪ್ರವಾಸ ಮಾಡಿ ಮಂಡ್ಯಕ್ಕೆ ಆಗಮಿಸಿದರು.

ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಕ್ರಿಯಾ ಯೋಜನೆ, ಗ್ರಾಮ ಸಭೆ, ವಿವಿಧ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕ, ಉದ್ಯೋಗ ಖಾತ್ರಿ ಯೋಜನೆ, ಗೋದಾಮು ಕಾಮ ಗಾರಿ, ವಸತಿ ಯೋಜನೆ ಸೇರಿದಂತೆ ಅಂಗನ ವಾಡಿ ಕೇಂದ್ರಕ್ಕೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಯೋಜನೆಗಳ ಅನುಷ್ಠಾನ, ಅನುದಾನ, ಶೌಚಾಲಯ ಹಾಗೂ ವಸತಿ ಯೋಜನೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಂ. ಕೃಷ್ಣರಾಜು ಹಾಗೂ ಉಪ ಕಾರ್ಯದರ್ಶಿ ಗಣಪತಿ ನಾಯಕ್‌ ಅವರಿಂದ ಮಾಹಿತಿ ಪಡೆದುಕೊಂಡರು.

ಗ್ರಾಮೀಣಾಭಿವೃದ್ಧಿ ಯೋಜನೆ ಗಳಾದ ನರೇಗಾ, ಸ್ವಚ್ಛ ಭಾರತ, ಸಂಜೀವಿನಿ ಯೋಜನೆಗಳು ಜಿಲ್ಲೆಯಲ್ಲಿ ಯಾವ ರೀತಿ ಅನುಷ್ಠಾನ ಮಾಡಲಾಗಿದೆ. ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ಏಕೆ ವಿಫಲ ಆಗುತ್ತವೆ? ಎಂಬ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದರು.

ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಫಲಾನುಭವಿ ಹತ್ತಿರ ಹಣವೇ ಇರುವುದಿಲ್ಲ. ಆದರೆ, ಅವರು ಮನೆ ನಿರ್ಮಾಣ ಮಾಡಿಕೊಳ್ಳಲು ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾ ಗುತ್ತಿದೆ. ಅವರಿಗೆ ಕಷ್ಟ ಆಗುವುದಿಲ್ಲವೇ, ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಶೌಚಾಲಯ ನಿರ್ಮಾಣ ಏಕೆ ಸಾಧ್ಯ ವಾಗಿಲ್ಲ ಎಂದು ಅವರು ಪ್ರಶ್ನಿಸಿದರು.

ಸರ್ಕಾರದಲ್ಲಿ ಯೋಜನೆಗಳು ಬದಲಾವಣೆ ಆದ ಸಂದರ್ಭದಲ್ಲಿ ಜನರು ಸ್ವೀಕರಿಸದೇ ಇದ್ದಾಗ ಅವರಿಗೆ ಯಾವ ರೀತಿ ಅರಿವು ಮೂಡಿಸಲಾಗುತ್ತದೆ ಎಂಬುದರ ಬಗ್ಗೆಯೂ ತಿಳಿಸಿಕೊಡಲಾಯಿತು. ಎನ್‌ಐಆರ್‌ ಅಂಡ್‌ ಪಿಆರ್‌ನ ತರಬೇತಿ ನಿರ್ದೇಶಕ ಆರ್‌. ಚಿನ್ನದೊರೈ, ಬೋಧಕಿ ಅರುಣಾ ಜಯಮಣಿ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.