ADVERTISEMENT

ಜಿಲ್ಲೆಯ ಗ್ರಾಮಾಭಿವೃದ್ಧಿಗೆ ₹ 7.50 ಕೋಟಿ

ಜ್ವಲಂತ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧ * ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 7.50 ಕೋಟಿ ಅನುದಾನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:34 IST
Last Updated 27 ಜನವರಿ 2017, 9:34 IST
ಜಿಲ್ಲೆಯ ಗ್ರಾಮಾಭಿವೃದ್ಧಿಗೆ ₹ 7.50 ಕೋಟಿ
ಜಿಲ್ಲೆಯ ಗ್ರಾಮಾಭಿವೃದ್ಧಿಗೆ ₹ 7.50 ಕೋಟಿ   

ಮಡಿಕೇರಿ:  ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ, ಗ್ರಾಮ ವಿಕಾಸ ಯೋಜನೆ ಅಡಿ ಪ್ರತಿ ವಿಧಾನ ಕ್ಷೇತ್ರ ವ್ಯಾಪ್ತಿಯ ಐದು ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಭರವಸೆ ನೀಡಿದರು.

ನಗರದ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 68ನೇ ಗಣರಾಜ್ಯೋತ್ಸವದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 7.50 ಕೋಟಿ ಅನುದಾನ ಒದಗಿಸಲಾಗುವುದು. ಜಿಲ್ಲೆಯ ಬುಡಕಟ್ಟು ಜನಾಂಗದ ಎಲ್ಲ ವಸತಿರಹಿತರಿಗೆ ಹಂತ ಹಂತವಾಗಿ ವಸತಿ ಸೌಲಭ್ಯ ಕಲ್ಪಿಸಲು ಎಲ್ಲ ರೀತಿಯಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕೆಲವು ಅರ್ಹ ಫಲಾನುಭವಿಗಳಿಗೆ ಜಿಲ್ಲಾಡಳಿತ ಈಗಾಗಲೇ ನಿವೇಶನ ಗುರುತಿಸಿದ್ದು, ಶೀಘ್ರವೇ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಮಡಿಕೇರಿಯಲ್ಲಿ ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ₹ 5 ಕೋಟಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಡೆಲ್ಟ್‌್ ಹಾಗೂ ನಗರಸಭೆಯ ಅನುದಾನದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ. ಮಡಿಕೇರಿಯಲ್ಲಿ ₹ 36.7 ಕೋಟಿ ಹಾಗೂ ಪೊನ್ನಂಪೇಟೆಯಲ್ಲಿ ₹ 9.50 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ₹ 18.25 ಕೋಟಿ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತ ಸಂಕೀರ್ಣದ ಕಾಮಗಾರಿಗೆ ಚಾಲನೆ ಲಭಿಸಿದೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಸತಿಗೃಹ ನಿರ್ಮಾಣಕ್ಕೆ ಸಹ ಜಾಗ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧ ಯೋಜನೆಗಳ ಅಡಿ ₹ 44.25 ಕೋಟಿ ವೆಚ್ಚದಲ್ಲಿ ಒಟ್ಟು 478 ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 300 ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ ಎಂದು ಹೇಳಿದರು.

₹ 56 ಲಕ್ಷ ವೆಚ್ಚದಲ್ಲಿ ಒಟ್ಟು 26 ಕೆರೆಗಳ ಅಭಿವೃದ್ಧಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೊಡಗು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಇಂದಿರಾ ಆವಾಸ್‌, ಬಸವ ವಸತಿ ಹಾಗೂ ಅಂಬೇಡ್ಕರ್‌ ನಿವಾಸ್‌ ಯೋಜನೆಗಳ ಅಡಿ 3,955 ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಂತ್ರಜ್ಞಾನ ಪಾರ್ಕ್‌: ಮಾದಾಪುರ ತೋಟಗಾರಿಕೆ ಕ್ಷೇತ್ರದಲ್ಲಿ ‘ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‌’ ಸ್ಥಾಪನೆಗೆ  ₹ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಭಾಗಮಂಡಲ ಜೇನುಕೃಷಿ ತರಬೇತಿ ಕೇಂದ್ರದಲ್ಲಿ ‘ಜೇನುಕೃಷಿ ಪಾರ್ಕ್‌’ ಕಾಮಗಾರಿ ಪ್ರಗತಿಯಲ್ಲಿದೆ. ಜೇನು ಮ್ಯೂಸಿಯಂ ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಧ್ವಜಾರೋಹಣದ ಬಳಿಕ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಮೀನುಗಾರಿಕೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ನಗರಸಭೆ, ಆರೋಗ್ಯ ಇಲಾಖೆಯ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.

ಸನ್ಮಾನ: ಸೇವಾ ಪ್ರಶಸ್ತಿ ಪಡೆದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್‌, ವಲಯ ಅರಣ್ಯಾಧಿಕಾರಿ ಪೌಲ್‌ ಅಂಥೋಣಿ, ಜಿಲ್ಲಾ ಪಂಚಾಯಿತಿ ಅಧೀಕ್ಷಕ ಎ.ಕೆ. ಆಂಜನೇಯ, ಹುದಿಕೇರಿ ಕಂದಾಯ ಪರಿವೀಕ್ಷಕ ರಾಧಾಕೃಷ್ಣ, ಸೇವಾದಳ ವಿಭಾಗದಲ್ಲಿ ಸುಂಟಿಕೊಪ್ಪದ ದೈಹಿಕ ಶಿಕ್ಷಣ ಶಿಕ್ಷಕ ನಂದ, ಚನ್ನಯ್ಯನಕೋಟೆಯ ರೋಜಿರಾಣಿ, ಕಗ್ಗೊಡ್ಲು ಗ್ರಾಮದ ಸಹ ಶಿಕ್ಷಕಿ ಜಯಶ್ರೀ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳಾದ ಗೌತಮ್‌, ಅಶ್ವಿನಿ, ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ:  ಆಕರ್ಷಕ ಪಥಸಂಚಲನ ನಡೆಸಿದ ಸರ್ಕಾರಿ ಪ್ರೌಢಶಾಲೆ ಸೇವಾದಳ (ಪ್ರಥಮ), ಸೇಂಟ್‌ ಮೈಕಲ್‌ ಶಾಲೆ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ವಿಭಾಗ (ದ್ವಿತೀಯ), ಸೇಂಟ್‌ ಮೈಕಲ್‌ ಆಂಗ್ಲ ಮಾಧ್ಯಮ ಶಾಲೆ (ತೃತೀಯ)ಗೆ ಪ್ರಶಸ್ತಿ ನೀಡಲಾಯಿತು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್‌, ಮಿಟ್ಟು ಚೆಂಗಪ್ಪ, ಕೊಲ್ಯದ ಗಿರೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.