ADVERTISEMENT

ಜೀವಜಲ ಸಂರಕ್ಷಣೆ ಎಲ್ಲರ ಕರ್ತವ್ಯವಾಗಲಿ

ವಿವಿಧೆಡೆ ಜಲ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 12:15 IST
Last Updated 23 ಮಾರ್ಚ್ 2018, 12:15 IST

ಮಂಡ್ಯ: ‘ಜೀವಜಲ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಅಪಾಯಕ್ಕೆ ಸಿಲುಕಲಿದೆ. ನೀರಿನ ಮೂಲಗಳ ರಕ್ಷಣೆ ಎಲ್ಲರ ಕರ್ತವ್ಯವಾಗಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಹೇಳಿದರು.

ವಿಶ್ವ ಜಲ ದಿನದ ಅಂಗವಾಗಿ ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಆವರಣದಲ್ಲಿ ಗುರುವಾರ ನಡೆದ ಜಲ ಸಂರಕ್ಷಣೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಣ್ಣಿನಲ್ಲೇ ಆಡಿ ಬದುಕುವ ಜನರಿಗೆ ಮಣ್ಣು ಕಾಲಿಗೆ ಅಂಟಿಕೊಳ್ಳದೆ ಇರಲು ಸಾಧ್ಯವಿಲ್ಲ. ಕಾಲಿಗೆ ಮಣ್ಣು ಅಂಟುತ್ತದೆ ಎಂಬ ಕಾರಣಕ್ಕೆ ಮನೆ ಸುತ್ತಲೂ ಕಾಂಕ್ರೀಟ್ ನಿರ್ಮಾಣ, ಡಾಂಬರ್‌ ರಸ್ತೆ, ಕಾಂಕ್ರೀಟ್ ಚರಂಡಿ ನಿರ್ಮಾಣವಾಗುತ್ತಿವೆ. ಕಾಂಕ್ರೀಟ್ ಹಾಗೂ ಡಾಂಬರ್ ನಿರ್ಮಾಣದಿಂದ ಮಳೆಯ ನೀರು ಬೀಳದಂತಾಗಿದೆ. ಇದರಿಂದ ಭೂಕಂಪದಂತಹ ಪ್ರಕೃತಿ ವಿಕೋಪಗಳು ನಡೆದು ಜೀವಿ ಸಂಕುಲ ನಾಶವಾಗುತ್ತದೆ. ದಕ್ಷಿಣ ಕರ್ನಾಟಕ ಹಾಗೂ ನದಿ ಪಾತ್ರದ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಕಾಣಿಸುವುದಿಲ್ಲ. ಹೀಗಾಗಿ ನೀರಿನ ರಕ್ಷಣೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು, ಬಿಹಾರ, ರಾಜಸ್ತಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ನೀರು ಇಲ್ಲದೆ ಜೀವನ ನಡೆಸಲಾಗದ ನಾವು ದಿನನಿತ್ಯ ಯಥೇಚ್ಛವಾಗಿ ನೀರನ್ನು ಪೋಲು ಮಾಡುತ್ತೇವೆ’ ಎಂದರು.

ADVERTISEMENT

‘ನೀರಿನ ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಕೆಲಸ ಮಾಡಬೇಕು. ಇತಿಹಾದಲ್ಲಿ ಕೆರೆಗಳು ಮನುಷ್ಯರನ್ನು ನುಂಗುತ್ತಿದ್ದವು. ಆದರೆ ಈಗ ಮನುಷ್ಯರು ಕೆರೆಗಳನ್ನು ನುಂಗುತ್ತಿದ್ದಾರೆ. ಜನಪ್ರತಿನಿಧಿಗಳು, ಗಣ್ಯರು ನೆಲ, ಜಲ ಹಾಗೂ ಭೂಮಿಯನ್ನು ಹಾಳು ಮಾಡುವಲ್ಲಿ ನಿರತರಾಗಿದ್ದಾರೆ. ಶಿಕ್ಷಣದಲ್ಲಿ ಜಲ ಸಂರಕ್ಷಣೆ ಕುರಿತು ಪಾಠ ಅಳವಡಿಕೆ ಮಾಡಬೇಕು. ಜಲ ಸಂಪತ್ತು ಸೇರಿದಂತೆ ನೈಸರ್ಗಿಕ ಸಂಪತ್ತನ್ನು ಹಾಳು ಮಾಡುವವರಿಗೆ ಕಠಿಣ ಶಿಕ್ಷೆ ನೀಡಲು ಕಾಯ್ದೆ ಜಾರಿಗೊಳಿಸಬೇಕು’ ಎಂದರು.
ಬಿ.ವಿ.ನಂದೀಶ್. ಡಾ.ಲಿಂಗರಾಜು, ಕೆ.ಜಗದೀಶ್, ಸಂದೀಪ್, ಪ್ರೊ.ನಾಗಾನಂದ, ಬಿ.ಮಂಜುನಾಥ್, ಕುಮಾರಸ್ವಾಮಿ, ಮೋಹನ್ ಇದ್ದರು.

ವಿಚಾರ ಸಂಕಿರಣ: ‘ಪ್ರತಿಯೊಂದು ಹನಿ ನೀರನ್ನು ಜಾಗರೂಕತೆಯಿಂದ ಬಳಸಿ ಜಗತ್ತಿನಲ್ಲಿ ತಲೆದೋರುವ ಜಲಕ್ಷಾಮವನ್ನು ತಡೆಗಟ್ಟಬೇಕು’ ಎಂದು ಮೈಸೂರಿನ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹೇಳಿದರು.

ವಿ.ಸಿ.ಫಾರಂನಲ್ಲಿ ಜಲ ದಿನಾಚರಣೆ ಅಂಗವಾಗಿ ಗುರುವಾರ ನಡೆದ ‘21ನೇ ಶತಮಾನದಲ್ಲಿ ನೀರಿನ ನಿರ್ವಹಣೆ ಮಾಡುವಲ್ಲಿ ಎದುರಿಸುವ ಸವಾಲುಗಳು’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನೀರು ಮಾನವನ ಮೂಲ ಅವಶ್ಯವಾಗಿದೆ. ನಿಸರ್ಗದಲ್ಲಿನ ನೀರು ಭೂಮಿಯ ಮೇಲಿನ ಪ್ರತಿಯೊಂದು ಜೀವರಾಶಿಗಳ ಹಕ್ಕಾಗಿದೆ. ಆದರೆ ಮಾನವನು ತನ್ನ ವಿಪರೀತ ನೀರಿನ ಬಳಕೆಯಿಂದ ಜಲಕ್ಷಾಮ ಉಂಟಾಗುವಂತೆ ಮಾಡುತ್ತಿದ್ದಾನೆ. ಪ್ರತಿಯೊಂದು ಹನಿ ನೀರನ್ನು ಮಿತವಾಗಿ ಬಳಸಬೇಕು. ಮಳೆಯಿಂದ ಬಿದ್ದ ನೀರನ್ನು ಸಂರಕ್ಷಣೆ ಮಾಡುವ ಕ್ರಮಗಳನ್ನು ಅನುಸರಿಸಬೇಕು. ಅಂತರ್ಜಲಕ್ಕಾಗಿ ಕೊಳವೆ ಬಾವಿ ಕೊರೆಸುವುದಕ್ಕೆ ಸರ್ಕಾರ ನಿಗದಿ ಮಾಡಿರುವ ಕ್ರಮವನ್ನು ಅನುಸರಿಸಬೇಕು. ನೀರಿನ ಮರುಪೂರಣಕ್ಕೆ ಒತ್ತು ಕೊಟ್ಟು ನೀರಿನ ಸಂರಕ್ಷಣೆ ಮಾಡುವುದನ್ನು ಒಂದು ಹವ್ಯಾಸ ಹಾಗೂ ಜವಾಬ್ದಾರಿಯಂತೆ ನಿರ್ವಹಿಸಬೇಕು’ ಎಂದರು.

ಕೃಷಿ ವಿವಿಯ ಕುಲಪತಿ ಎಂ.ಎಸ್.ನಟರಾಜು ಮಾತನಾಡಿ ‘ರೈತರು ಕೃಷಿಗೆ ಅವಶ್ಯಕತೆಗಿಂತ ಹೆಚ್ಚು ನೀರನ್ನು ಬಳಕೆ ಮಾಡಬಾರದು. ನೀರು ನಿರ್ವಹಣೆಗೆ ತಂತ್ರಜ್ಞಾನ ಬಳಸಬೇಕು. ನೀರು ನಿರ್ವಹಣೆಯಲ್ಲಿ ತಂತ್ರಜ್ಞಾನ ಬಳಸಿದರೆ ನೀರಿನ ಉಳಿತಾಯವಾಗುತ್ತದೆ’ ಎಂದರು. ಪ್ರಾಧ್ಯಾಪಕ ಡಾ.ನಾಗರಾಜು, ಹಿರಿಯ ಭೂ ವಿಜ್ಞಾನಿ ಅಂಬಿಕಾ, ಡಾ.ಎಸ್ಎನ್. ವಾಸುದೇವನ್, ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ, ಯೋಗೇಶ್, ಎಚ್.ಟಿ.ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.