ADVERTISEMENT

ಜೋಡಿ ರೈಲು ಮಾರ್ಗ: ಉನ್ನತ ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:49 IST
Last Updated 7 ನವೆಂಬರ್ 2017, 8:49 IST
ಶ್ರೀರಂಗಪಟ್ಟಣದಲ್ಲಿ ಪೂರ್ಣಗೊಂಡಿರುವ ಜೋಡಿ ರೈಲು ಮಾರ್ಗ ಕಾಮಗಾರಿಯ ಗುಣಮಟ್ಟವನ್ನು ಉನ್ನತ ಅಧಿಕಾರಿಗಳ ತಂಡ ಟ್ರ್ಯಾಲಿಯಲ್ಲಿ ಸಂಚರಿಸುವ ಮೂಲಕ ಸೋಮವಾರ ಪರಿಶೀಲನೆ ನಡೆಸಿತು
ಶ್ರೀರಂಗಪಟ್ಟಣದಲ್ಲಿ ಪೂರ್ಣಗೊಂಡಿರುವ ಜೋಡಿ ರೈಲು ಮಾರ್ಗ ಕಾಮಗಾರಿಯ ಗುಣಮಟ್ಟವನ್ನು ಉನ್ನತ ಅಧಿಕಾರಿಗಳ ತಂಡ ಟ್ರ್ಯಾಲಿಯಲ್ಲಿ ಸಂಚರಿಸುವ ಮೂಲಕ ಸೋಮವಾರ ಪರಿಶೀಲನೆ ನಡೆಸಿತು   

ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಸೋಮವಾರ ಪಟ್ಟಣದಲ್ಲಿ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಿತು.

ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಮನೋಹರ್‌, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ (ಡಿಆರ್‌ಎಂ) ಆರ್‌.ಎಸ್‌. ಸೆಕ್ಸೇನಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಶೋಕ್‌ ಗುಪ್ತಾ ಇತರರ ತಂಡದಿಂದ ಪರಿಶೀಲನೆ ನಡೆಯಿತು.

ಕಾವೇರಿ ನದಿಯ ಎರಡೂ ಸೇತುವೆಗಳ ನಡುವಿನ 1.5 ಕಿ.ಮೀ. ಉದ್ದದ ಹೊಸ ರೈಲು ಮಾರ್ಗದಲ್ಲಿ ಟ್ರ್ಯಾಲಿ ಮೂಲಕ ಸಂಚಾರ ನಡೆಸಿ ಗುಣಮಟ್ಟ ಪರೀಕ್ಷಿಸಿತು. ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಮನೋಹರ್‌ ಅವರಿಗೆ ನೈರುತ್ಯ ರೈಲು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

‘ರೈಲ್ವೆ ಸುರಕ್ಷತಾ ಆಯುಕ್ತರಿಂದ ಕಾಮಗಾರಿ ಪರಿಶೀಲನೆ ನಡೆದಿರುವುದರಿಂದ ಈ ಮಾರ್ಗದಲ್ಲಿ ಆದಷ್ಟು ಶೀಘ್ರ ರೈಲುಗಳು ಓಡಾಡಲಿವೆ. ಕೆಂಗೇರಿಯಿಂದ ಯಲಿಯೂರು ವರೆಗೆ ಈ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದೆ. ಯಲಿಯೂರಿನಿಂದ ಮೈಸೂರು ವರೆಗಿನ ವಿದ್ಯುದೀಕರಣ ಕಾಮಗಾರಿ ಬಾಕಿ ಇದ್ದು, ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದರು.

ಬೆಂಗಳೂರು– ಮೈಸೂರು ನಡುವಿನ 140 ಕಿ.ಮೀ ಉದ್ದ ಜೋಡಿ ರೈಲು ಮಾರ್ಗದ ಪೈಕಿ ಶ್ರೀರಂಗಪಟ್ಟಣದಲ್ಲಿ 1.5 ಕಿ.ಮೀ ರೈಲು ಮಾರ್ಗ ಕಾಮಗಾರಿ ಕೆಲಕಾಲ ನನೆಗುದಿಗೆ ಬಿದ್ದಿತ್ತು. ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.