ADVERTISEMENT

ತ್ರಿಶಂಕು ಸ್ಥಿತಿಯಲ್ಲಿ ಎಲ್‌ಐಸಿ ಹೊಸ ಬಡಾವಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:51 IST
Last Updated 9 ನವೆಂಬರ್ 2017, 8:51 IST

ಮದ್ದೂರು: ಪಟ್ಟಣದ ಹೃದಯ ಭಾಗದಲ್ಲಿದ್ದರೂ ಈ ಬಡಾವಣೆ ಮೂಲ ಸೌಲಭ್ಯಗಳಿಂದ ದೂರವಾಗಿದೆ. ತ್ರಿಶಂಕು ಸ್ಥಿತಿಯಲ್ಲಿಯೇ ಇದೆ. ಪಟ್ಟಣದ ಎಲ್‌ಐಸಿ ಕಚೇರಿ ಹಿಂಭಾಗದ ಹೊಸ ಬಡಾವಣೆಯಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ಸಾಮಾನ್ಯ, ಸುಸಜ್ಜಿತ, ಐಶಾರಾಮಿ ಮನೆಗಳು ನಿರ್ಮಾಣಗೊಂಡಿವೆ.

ಆದರೆ ಈ ಬಡಾವಣೆಗೆ ಸರಿಯಾದ ರಸ್ತೆ ಇಂದಿಗೂ ಇಲ್ಲ. ಜನರೇ ಮಣ್ಣು ಸುರಿದು ಮಾಡಿಕೊಂಡಿರುವ ಕೊರಕಲು ರಸ್ತೆ ನಿಮ್ಮನ್ನು ಸ್ವಾಗತಿಸುತ್ತದೆ. ಒಳಚರಂಡಿ ಇರಲಿ, ಹೊರ ಚರಂಡಿಯ ಸೌಲಭ್ಯವೂ ಇಲ್ಲ.

ಇಲ್ಲಿನ ಕೆಲವು ನಿವೇಶನಗಳು, ಮನೆಗಳು ಪುರಸಭೆಯಿಂದ ಅನ್ಯಕ್ರಾಂತ ಗೊಂಡಿವೆ. ಆದರೆ ಬಹುತೇಕ ಮನೆಗಳು ಇಂದಿಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿಯೇ ಇವೆ. ಹೀಗಾಗಿ ಈ ಬಡಾವಣೆಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಪುರಸಭೆಗೆ ಸಾಧ್ಯವಾಗಿಲ್ಲ.

ADVERTISEMENT

ಈ ಬಡಾವಣೆಯ ಎರಡು ಅಡ್ಡರಸ್ತೆಗಳನ್ನು ಮಾತ್ರ ಈಚೆಗೆ ಡಾಂಬರು ಹಾಕಿ ರಸ್ತೆಯನ್ನಾಗಿಸಲಾಗಿದೆ. ಆದರೆ ಅಲ್ಲಿ ಇಂದಿಗೂ ಚರಂಡಿ ನಿರ್ಮಾಣಗೊಂಡಿಲ್ಲ. ಹೀಗಾಗಿ ಮಳೆ ಬಂದಾಗ ನೀರು ಮನೆ ಆವರಣಕ್ಕೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಉಳಿದಂತೆ ಒಳಚರಂಡಿ ಸೌಲಭ್ಯ ಇಲ್ಲದ ಕಾರಣ ಜನರೇ ತಮ್ಮ ಮನೆಗಳಲ್ಲಿ ಶೌಚಗುಂಡಿ ನಿರ್ಮಿಸಿಕೊಂಡು ಅದಕ್ಕೆ ಶೌಚಾಲಯ ಸಂಪರ್ಕಗೊಳಿಸಿದ್ದಾರೆ.

ನಾಲೆ ನೀರು ಮನೆಗೆ: ಉಳಿದಂತೆ ಈ ಬಡಾವಣೆಗೆ ಹೊಂದಿಕೊಂಡಿರುವ ಭೈರಾನ್‌ ನಾಲೆಯ ಹೂಳನ್ನು ಎತ್ತಿ ದುರಸ್ತಿಗೊಳಿಸದ ಕಾರಣ ನಾಲೆಗೆ ಹೆಚ್ಚುವರಿಯಾಗಿ ನೀರು ಬಿಟ್ಟಾಗ ಇಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗುತ್ತದೆ. ಇಲ್ಲಿನ ನಿವಾಸಿಗಳ ಪಾಡು ಹೇಳತೀರದ್ದಾಗಿದೆ.

ವಿದ್ಯುತ್‌ ಸಮಸ್ಯೆ: ಈ ಬಡಾವಣೆಗೆ ಪ್ರತ್ಯೇಕ ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸದ ಕಾರಣ ಇಲ್ಲಿ ವಿದ್ಯುತ್‌ ವ್ಯತ್ಯಯ ಸರ್ವೆ ಸಾಮಾನ್ಯವಾಗಿದೆ. ಹಗಲಿನ ವೇಳೆಯಂತೂ ಹತ್ತಾರು ಬಾರಿ ವಿದ್ಯುತ್‌ ನಿಲುಗಡೆಯಾಗುತ್ತದೆ. ರಾತ್ರಿಯೂ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ ಎನ್ನುವುದು ಇಲ್ಲಿಯ ನಿವಾಸಿಗಳ ಸಾಮೂಹಿಕ ದೂರು.

ನೀರಿನ ಸಮಸ್ಯೆ: ಈಚೆಗೆ ಪುರಸಭೆ ಈ ಹೊಸ ಬಡಾವಣೆಗೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ನೀಡಿದೆ. ನಾಲ್ಕು ದಿನಗಳಿಗೊಮ್ಮೆ ನೀರು ಬರಲಿದೆ. ಆದರೆ ಸಮರ್ಪಕವಾಗಿ ಕೊಳವೆ ಅಳವಡಿಸದ ಕಾರಣ ಮನೆಗಳ ಸಂಪಿಗೆ ನೀರು ಬರುತ್ತಿಲ್ಲ. ಹೀಗಾಗಿ ಇಲ್ಲಿ ಮಹಿಳೆಯರು ನೀರಿಗಾಗಿ ಸರ್ಕಸ್‌ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ಗೃಹಿಣಿ ಪವಿತ್ರಾ.

ಒಟ್ಟಾರೆ ಪಟ್ಟಣದ ಹೃದಯ ಭಾಗದಲ್ಲಿರುವ ಈ ಬಡಾವಣೆಯ ಅಭಿವೃದ್ಧಿಗೆ ಪುರ ಸಭೆ ಗಮನಹರಿಸಬೇಕಿದೆ. ಇಲ್ಲಿನ ಜನರ ಬದುಕು ಸಹ್ಯವಾಗಿಸಬೇಕಿದೆ ಎನ್ನುವುದು ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.