ADVERTISEMENT

ದುಡ್ಡು ತಕ್ಕಂಡು ಹೋದ್ರೆ ಟಿಕೆಟ್‌ ತರಬಹುದು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 5:47 IST
Last Updated 29 ಡಿಸೆಂಬರ್ 2017, 5:47 IST

ಶ್ರೀರಂಗಪಟ್ಟಣ: ‘ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ದುಡ್ಡು ಕೊಟ್ಟವರಿಗೆ ರಾಜಕೀಯ ಪಕ್ಷದ ಟಿಕೆಟ್‌ ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮಾಜಿ ಸಂಸದ ಜಿ. ಮಾದೇಗೌಡ ಹೇಳಿದರು. ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ 132ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಚುನಾವಣೆ ಟಿಕೆಟ್‌ ನೀಡುವಾಗ ಪಕ್ಷ ಕಟ್ಟಿದವರನ್ನು ನಿರ್ಲಕ್ಷಿಸಬಾರದು. ಸೋತರೂ ಪರವಾಗಿಲ್ಲ ಎಂದು ಪಕ್ಷ ಕಟ್ಟಿದವರಿಗೆ ಆದ್ಯತೆ ನೀಡಬೇಕು’ ಎಂದರು.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ ಬಂಡಾಯ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ನಾನು ಒಪ್ಪುವುದಿಲ್ಲ. ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌ ಕೊಡಬೇಕು’ ಎಂದು ಹೇಳಿದರು. ‘ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಲು ಅಧಿಕಾರಿಗಳಿಗಷ್ಟೇ ಅಲ್ಲ, ಮಂತ್ರಿಗಳಿಗೂ ದುಡ್ಡು ಕೊಡಬೇಕಾದ ಸ್ಥಿತಿ ಬಂದಿದೆ. ಕಾಸು ಬಿಚ್ಚದಿದ್ದರೆ ಯಾವ ಕೆಲಸವೂ ನಡೆಯುವುದಿಲ್ಲ’ ಎಂದರು.

ADVERTISEMENT

‘ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮಗ ಮಧು ಮಾದೇಗೌಡ ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿದ್ದಾನೆ. ಅಲ್ಲಿಯೂ ಮೂರು ಮಂದಿ ಆಕಾಂಕ್ಷಿಗಳಿದ್ದಾರೆ. ಅಂತಿಮವಾಗಿ ಪಕ್ಷ ತೀರ್ಮಾನಿಸುತ್ತದೆ’ ಎಂದ ಅವರು, ‘ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶಕ್ಕೆ ಕರೆದರೆ ಮಾತ್ರ ಹೋಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್‌ ಪಕ್ಷ ಮಹತ್ವದ ಪಾತ್ರ ವಹಿಸಿದೆ. ನಿಷ್ಠಾವಂತರ ತ್ಯಾಗದಿಂದ ಪಕ್ಷ ಉಳಿದು ಬೆಳೆದಿದೆ. ಸದ್ಯದ ಸ್ಥಿತಿಯಲ್ಲಿ ಪಕ್ಷ ಪುನರುಜ್ಜೀವಗೊಳ್ಳಬೇಕು. ಯುವಶಕ್ತಿಯನ್ನು ಬಳಸಿಕೊಂಡು ಪಕ್ಷ ಕಟ್ಟಬೇಕು’ ಎಂದು ಸಲಹೆ ಮಾಡಿದರು.

ಸನ್ಮಾನ: ಜಿ.ಮಾದೇಗೌಡ, ಚಂದೂಪುರ ಪಾಪಣ್ಣ, ಎಚ್‌.ಟಿ. ಕೃಷ್ಣೇಗೌಡ, ಬಿ. ರಾಮಸ್ವಾಮಿ, ಎಚ್.ಸಿ. ದಾಸೇಗೌಡ, ಡಾ.ಮುನೀರ್‌ ಅಹಮದ್‌, ತಿಬ್ಬೇಗೌಡ, ಶ್ರೀನಿವಾಸ್‌, ಸ್ವಾಮಿಗೌಡ, ಎನ್‌.ಪಿ. ಯೋಗಾನರಸಿಂಹ, ನಾಗರಾಜು, ಎಂ.ಎಸ್‌ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಚೈತ್ರಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಆತ್ಮಾನಂದ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌. ಲಿಂಗರಾಜು, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರೊ. ಕರಿಮುದ್ದೀನ್‌ ಕಾಂಗ್ರೆಸ್‌ ಪಕ್ಷದ ಬೆಳವಣಿಗೆ ಕುರಿತು ಮಾತನಾಡಿದರು.

ನಾನೇ ಸ್ಪರ್ಧಿಸುತ್ತೇನೆ’ –ಪುಟ್ಟೇಗೌಡ

ಶ್ರೀರಂಗಪಟ್ಟಣ: ‘25 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದೇನೆ. 2018ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಿಂದಲೇ ಸ್ಪರ್ಧಿಸುತ್ತೇನೆ’ ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಎಂ. ಪುಟ್ಟೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ ಅವರು ಅವರು ಮಾತನಾಡಿದರು.

‘ಜೆಡಿಎಸ್‌ ಬಂಡಾಯ ಶಾಸಕ ರಮೇಶ ಬಂಡಿಸಿದ್ದೇಗೌಡ ನಾನೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡುವ ಕುರಿತು ಪಕ್ಷದ ವರಿಷ್ಠರು ಎಲ್ಲಿಯೂ ಹೇಳಿಲ್ಲ. ಇಷ್ಟಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದರು.

ಮಹಿಳಾ ಘಟಕದ ಉಪಾಧ್ಯಕ್ಷೆ ಶೀಲಾ ನಂಜುಂಡಯ್ಯ, ಮಜ್ದೂರ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ತಾಲ್ಲೂಕು ಅಧ್ಯಕ್ಷೆ ಗೌರಮ್ಮ, ಯುವ ಘಟಕದ ಅಧ್ಯಕ್ಷ ಗುಣವಂತ, ಉಪಾಧ್ಯಕ್ಷ ದಿಲೀಪ್‌, ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ಸಿ.ಎಲ್‌. ರಾಮು, ಹಿಂದುಳಿದ ಘಟಕದ ಅಧ್ಯಕ್ಷ ಗಂಜಾಂ ರಾಮು, ಸಿದ್ದಮಾದಯ್ಯ, ಶಿವನಂಜೇಗೌಡ, ನಾರಾಯಣ, ಪ್ರಭಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.