ADVERTISEMENT

ಧರ್ಮಸ್ಥಳದಲ್ಲಿ ಪ್ರಮಾಣ: ಎಚ್‌ಡಿಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:48 IST
Last Updated 20 ಏಪ್ರಿಲ್ 2017, 6:48 IST
ನಾಗಮಂಗಲ ತಾಲ್ಲೂಕಿನ ಕದಬಹಳ್ಳಿಗೆ ಭೇಟಿ ನೀಡಿದ ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕ ಅಪ್ಪಾಜಿ ಗೌಡ ಸ್ವಾಗತಿಸಿದರು. ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸುರೇಶ ಗೌಡ, ಜಿ.ಪಂ. ಸದಸ್ಯ ಡಿ.ಕೆ.ಶಿವಪ್ರಕಾಶ ಇದ್ದಾರೆ
ನಾಗಮಂಗಲ ತಾಲ್ಲೂಕಿನ ಕದಬಹಳ್ಳಿಗೆ ಭೇಟಿ ನೀಡಿದ ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕ ಅಪ್ಪಾಜಿ ಗೌಡ ಸ್ವಾಗತಿಸಿದರು. ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸುರೇಶ ಗೌಡ, ಜಿ.ಪಂ. ಸದಸ್ಯ ಡಿ.ಕೆ.ಶಿವಪ್ರಕಾಶ ಇದ್ದಾರೆ   

ನಾಗಮಂಗಲ: ‘ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲು ನಾನು ಹೇಳಿದ್ದೇನೆಂದು ಶಾಸಕ ಚಲುವರಾಯಸ್ವಾಮಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧರಿದ್ದರೆ, ನಾನೂ ಸಿದ್ಧ’ ಎಂದು ಹೇಳುವ ಮೂಲಕ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ  ತಿರುಗೇಟು ನೀಡಿದ್ದಾರೆ.ತಾಲ್ಲೂಕಿನ ದೇವರಮಾವಿನಕೆರೆಯಲ್ಲಿ ಬಿಂಡಿಗನವಿಲೆಯ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಕೆ.ಶಿವಪ್ರಕಾಶ ಮನೆಗೆ ಬುಧವಾರ ಖಾಸಗಿ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘7 ಬಂಡಾಯ ಶಾಸಕರು ಪಕ್ಷ ಬಿಟ್ಟ ತಕ್ಷಣ ನಾನೇನು ಬೀದಿಗೆ ಬಿದ್ದಿಲ್ಲ, ರಾಜಕಾರಣದಲ್ಲಿರುವವರು ಬೀದಿಯಲ್ಲಿರದೇ, ಅರಮನೆಯಲ್ಲಿ ಅಥವಾ ಎ.ಸಿ ರೂಮಿನಲ್ಲಿದ್ದರೆ ಜನರನ್ನು ತಲುಪುವುದಕ್ಕೆ ಆಗುವುದಿಲ್ಲ’ ಎಂದು ಶಾಸಕ ಬಾಲಕೃಷ್ಣ ಅವರ ಮಾತಿಗೆ ವ್ಯಂಗ್ಯವಾಡಿದರು. ರಾಜ್ಯಸಭೆ ಚುನಾವಣೆಯಲ್ಲಿ ಅಮಾನತ್ತಾಗಿರುವ ಶಾಸಕರು ಯಾವ ಉದ್ದೇಶಕ್ಕೆ ಮತ ಹಾಕಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಅವರಲ್ಲಿ ಗೊಂದಲವಿದೆ, ಹತಾಶರಾಗಿ ಮತ್ತು ಭೀತಿಯಿಂದ ಪೊಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

‘ಜಮೀರ್ ಅಹಮದ್ ಖಾನ್ ಅವರಿಗೆ ಯಾವುದೇ ದೇವರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ನಾನು ಅವರ ಮಾತುಗಳಿಗೆ ಮನ್ನಣೆ ನೀಡುವುದಿಲ್ಲ. ಪಕ್ಷಕ್ಕೆ ಮೋಸ ಮಾಡಿದವರು ಮತ್ತು ಬೆನ್ನಿಗೆ ಚೂರಿ ಹಾಕಿದವರ ಜತೆ ಈ ಜೀವನದಲ್ಲಿ ಸ್ನೇಹ ಮಾಡುವುದಿಲ್ಲ, ಸಾರ್ವಜನಿಕರಲ್ಲಿ ಅವರ ಬಗ್ಗೆ ಎದ್ದಿರುವ ಆಕ್ರೋಶವನ್ನು ತಣ್ಣಗೆ ಮಾಡಲು ಈ ರೀತಿಯ ಹುಡುಗಾಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದರು.‘ನಾನು ಮುಖ್ಯಮಂತ್ರಿಯಾದ 2 ತಿಂಗಳಲ್ಲಿ ನನ್ನನ್ನು ಇಳಿಸಲು ಹೊರಟವರು ಯಾರು’ ಎಂದು ಶಾಸಕ ಚಲುವರಾಯಸ್ವಾಮಿ ಹೆಸರನ್ನು ಹೇಳದೇ ಟೀಕಿಸಿದರು. ‘ನಮ್ಮನ್ನು ಕೆಣಕಿ ಕಷ್ಟಕ್ಕೆ ಸಿಲುಕಬೇಡಿ’ ಎಂದು ಬಂಡಾಯ ಶಾಸಕರಿಗೆ ಎಚ್ಚರಿಸಿದರು.

ADVERTISEMENT

ನಾಗಮಂಗಲದ ಅಭ್ಯರ್ಥಿ ಆಯ್ಕೆ ಕುರಿತು ಯಾವುದೇ ಗೊಂದಲವಿಲ್ಲ. ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸುರೇಶ ಗೌಡ ಮತ್ತು ಲಕ್ಷ್ಮಿ ಅಶ್ವಿನ್ ಗೌಡರನ್ನು ಒಟ್ಟು ಮಾಡಿಯೇ ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿದೇವೇಗೌಡರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನು ಹೇರುವುದಿಲ್ಲ ಎಂದರು.

ಈ ರಾಜ್ಯದ ರೈತರ ಕಷ್ಟವನ್ನು ಪರಿಹರಿಸಲು ಪ್ರತಿ ಸೀಟು ಗೆಲ್ಲುವುದು ಅನಿವಾರ್ಯ. ಹಾಗಾಗಿಯೇ ನಾಗಮಂಗಲ ಕ್ಷೇತ್ರ ನಮಗೆ ಮುಖ್ಯ ಎಂದರು. ಕದಬಹಳ್ಳಿಯ ಕಾವೇಟಿರಂಗನಾಥಸ್ವಾಮಿ ಮತ್ತು ದೇವರ ಮಾವಿನಕೆರೆಯ  ಲಕ್ಷ್ಮಿದೇವರಿಗೆ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಒಳ್ಳೆಯ ಮಳೆ–ಬೆಳೆಯಾಗಲಿ ಎಂದು ಪ್ರಾರ್ಥಿಸಿದರು. ಬಿ.ಜಿ.ನಗರದ ಮಯೂರ ಹೋಟೆಲ್ ಬಳಿ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಿದ್ದ ವೇಳೆ ಮುಸ್ಲಿಂ ಅಭಿಮಾನಿಯೊಬ್ಬ ಎಚ್‌ಡಿಕೆಗೆ ಹೂವಿನ ಹಾರ ಹಾಕಿ ನಂತರ ₹ 10 ರ ಮುಖಬೆಲೆಯ ₹ 200ನ್ನು ಅವರ ಮೇಲೆ ತೂರಿದ.

ನಂತರ ಎಪಿಎಂಸಿ ಮಾಜಿ ಅಧ್ಯಕ್ಷ ಬೆಳ್ಳೂರಿನ ಅಲೀಂ  ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಶ್ರೀನಿವಾಸ ಮನೆಗೆ ಭೇಟಿ  ನೀಡಿದರು.
ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಲ್..ಆರ್. ಶಿವರಾಮೇಗೌಡ, ಸುರೇಶಗೌಡ, ಮುಖಂಡರಾದ ಲಕ್ಷ್ಮಿ ಅಶ್ವಿನ್ ಗೌಡ, ಜಿ.ಪಂ. ಸದಸ್ಯ ಡಿ.ಕೆ. ಶಿವಪ್ರಕಾಶ, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ, ತಾಲ್ಲೂಕು ಘಟಕ ಅಧ್ಯಕ್ಷ ಜವರೇಗೌಡ, ಮುಖಂಡ ನೆಲ್ಲಿಗೆರೆ ಬಾಲು, ಎಪಿಎಂಸಿ ನಿರ್ದೆಶಕ ಜಗದೀಶ, ಬಿಂಡಿಗನವಿಲೆ ಗ್ರಾ.ಪಂ. ಅಧ್ಯಕ್ಷ ರಮೇಶ, ಮುಖಂಡರಾದ ಶೇಖರ, ಕೃಷ್ಣ , ಎಸ್.ಕೆ.ನಾಗೇಶ, ದೊರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.