ADVERTISEMENT

ನಿವೇಶನ ಹಸ್ತಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 10:31 IST
Last Updated 7 ಡಿಸೆಂಬರ್ 2017, 10:31 IST

ಕೆ.ಆರ್.ಪೇಟೆ: ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರವಾಸಿಮಂದಿರ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಜಿಲ್ಲಾಡಳಿತವು ಘೋಷಿಸಿರುವಂತೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಬಾಬೂ ಜಗಜೀವನರಾಂ ಭವನಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಇಲ್ಲದೆ ಇದ್ದರೆ ಡಿ.8ರಿಂದ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ನಾರಾಯಣಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ವಶದಲ್ಲಿರುವ ಪ್ರವಾಸಿ ಬಡಾವಣೆಯಲ್ಲಿನ ನಿವೇಶನಗಳ ಪೈಕಿ 100X100 ಅಳತೆಯ ಎರಡು ನಿವೇಶನಗಳಲ್ಲಿ ಇಬ್ಬರು ಮಹನೀಯರ ಹೆಸರಲ್ಲಿ ಭವನ ನಿರ್ಮಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ಎರಡು ವರ್ಷಗಳ ಹಿಂದೆಯೇ ನಾಮಫಲಕವನ್ನೂ ಹಾಕಲಾಗಿದೆ. ಆದರೆ, ಇದುವರೆಗೂ ನಿವೇಶನಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿ ಭವನದ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಭವನ ನಿರ್ಮಿಸಲು ಸಾಧ್ಯವಾಗಿಲ್ಲ ಎಂದರು.

ಅಕ್ರಮ ನಿವೇಶನ, ಕಟ್ಟಡಗಳ ವಶಕ್ಕೆ ಮೀನಮೇಷ:
ಪಟ್ಟಣದಲ್ಲಿ ಹಲವೆಡೆ ಪ್ರಭಾವಿಗಳು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಆದರೆ, ಅವರನ್ನು ತೆರವು ಮಾಡದೆ ಬಡಜನರು ಹೇಮಾವತಿ ಬಡಾವಣೆಯಲ್ಲಿ ಕಟ್ಟಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಪುರಸಭೆಯ ಕ್ರಮ ಕಾನೂನುಬಾಹಿರ. ಪುರಸಭೆ ಕಾರ್ಯಲಯದ ಪಕ್ಕದಲ್ಲಿನ ಜಾಗ ಸೇರಿದಂತೆ ಆರೂವರೆ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇಲ್ಲಿಂದ ಅತಿಕ್ರಮಣಕಾರರನ್ನು ತೆರವುಗೊಳಿಸಲು ಕೋರಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ಮನವಿ ನೀಡಲಾಗಿದೆ. ಆದರೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪುರಸಭೆ ಸದಸ್ಯರಾದ ಎಚ್.ಆರ್.ಲೋಕೇಶ್, ಕೆ.ಆರ್.ಹೇಮಂತಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಮುಖಂಡರಾದ ರಾಮಕೃಷ್ಣೇಗೌಡ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.