ADVERTISEMENT

ಪರಂಪರೆ ತಿಳಿದುಕೊಳ್ಳಲು ಯತ್ನಿಸಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:35 IST
Last Updated 31 ಡಿಸೆಂಬರ್ 2016, 5:35 IST

ಮಂಡ್ಯ: ಮಹನೀಯರು ಬಿಟ್ಟು ಹೋಗಿರುವ ಹಿಂದಿನ ಪರಂಪರೆ ತಿಳಿದುಕೊಳ್ಳುವ ಪ್ರಯತ್ನ ಎಲ್ಲರೂ ಮಾಡಬೇಕು. ಆ ಮೂಲಕ ಅವರ ಆದರ್ಶ ಪಾಲಿಸಬೇಕು ಎಂದು ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಸಲಹೆ ಮಾಡಿದರು.

ನಗರದ ಗಾಂಧಿ ಭವನದಲ್ಲಿ ಕದಂಬ ಸೈನ್ಯ ವತಿಯಿಂದ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಕದಂಬ ಸೈನ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಕನ್ನಡಿಗರ ಕೊಡುಗೆ ಗೊತ್ತಾಗುತ್ತದೆ. ಅದರಲ್ಲಿ ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ ಹಾಗೂ ಹಲವು ರಾಜರ ಕೊಡುಗೆ ಶಾಸನದ ಸಮೇತ ಸಿಗುತ್ತದೆ ಎಂದು ಹೇಳಿದರು.

ಇತಿಹಾಸದ ಪುಟದಲ್ಲಿ ಕನ್ನಡ ನಾಡಿನ ರಾಜ ಮನೆತನದ ಆಡಳಿತ ವೈಖರಿಗಳು ಸುವರ್ಣಾಕ್ಷರದಲ್ಲಿ ಕಾಣ ಸಿಗುತ್ತವೆ. ಕನ್ನಡ ಭಾಷೆ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಒಗ್ಗಟ್ಟಿನಿಂದ ದುಡಿಯುವ ಮನಗಳು ಬೇಕಿವೆ ಎಂದು ಹೇಳಿದರು.

ಆಗಿನ ಮಂಡೆಯಾ (ಮಂಡ್ಯ) ಎಂಬ ಗ್ರಾಮಕ್ಕೆ ಕೃಷ್ಣ ದೇವರಾಯರು 1716ರಲ್ಲಿ ಭೇಟಿ ನೀಡಿದ್ದಾಗ ಅವರಿಗೆ ಶಿಲಾ ಶಾಸನ ಒಂದು ಸಿಕ್ಕಿತ್ತು. ಅದರ ಪ್ರಕಾರ ಮಂಡೆಯಾ ಎಂದರೆ ಜೂಜು ಆಡುವವರು ಎಂಬುದನ್ನು ತಿಳಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕೃಷಿ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಿ.ಎಸ್‌. ಪುಟ್ಟರಾಜು ಅವರು, ನೆಲ, ಜಲ ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸುವ ಮೂಲಕ ಯುವ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕನ್ನಡ ಭಾಷೆ ಉಳಿವು ಕನ್ನಡ ನಾಡಿನಲ್ಲಿ ಆಗಬೇಕು ಎಂದರು.

ತಲಕಾಡಿನ ಹಸ್ತಿಕೇರಿ ಮಠ ಕ್ಷೇತ್ರದ ಪೀಠಾಧ್ಯಕ್ಷ ಡಾ. ಸಿದ್ದಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯ ವಹಿಸಿದ್ದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಕದಂಬ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಇಂಡಿಯನ್‌ ಪಬ್ಲಿಕ್‌ ಸ್ಕೂಲ್‌ ಸಂಸ್ಥಾಪಕ ಎಂ.ಎಲ್‌. ರವೀಂದ್ರಸ್ವಾಮಿ, ತಲಕಾಡು ದಾಸೇಗೌಡ, ದಲಿತ ಮುಖಂಡ ವೆಂಕಟಗಿರಿಯಯ್ಯ, ಗಾಯಕ ಎಂ.ಎನ್‌. ಶ್ರೀಧರ್‌, ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌, ವಕೀಲ ರಾಜೇಗೌಡ, ಉಮ್ಮಡಹಳ್ಳಿ ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.