ADVERTISEMENT

ಪುಷ್ಕರ: ಯತಿಗಳಿಂದ ಪುಣ್ಯ ಸ್ನಾನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 7:30 IST
Last Updated 22 ಸೆಪ್ಟೆಂಬರ್ 2017, 7:30 IST
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರದಲ್ಲಿ ಗುರುವಾರ ಬೆಳಿಗ್ಗೆ ವಿವಿಧೆಡೆಗಳಿಂದ ಬಂದಿದ್ದ ಯತಿಗಳು ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರದಲ್ಲಿ ಗುರುವಾರ ಬೆಳಿಗ್ಗೆ ವಿವಿಧೆಡೆಗಳಿಂದ ಬಂದಿದ್ದ ಯತಿಗಳು ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರದ 10ನೇ ದಿನವಾದ ಗುರುವಾರ ಕೂಡ ಅಪಾರ ಭಕ್ತರು ಬಂದು ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.
ಪಟ್ಟಣದ ಸೋಪಾನಕಟ್ಟೆ, ದೊಡ್ಡ ಗೋಸಾಯಿ ಘಾಟ್‌, ಪಶ್ಚಿಮ ವಾಹಿನಿ ಮೊದಲಾದ ಕಡೆ ಪುಣ್ಯ ಸ್ನಾನ ಮಾಡಿದರು. ಶೃಂಗೇರಿಯ ಶಂಕರ ಮಠದ ಸ್ವಾಮೀಜಿ ಸ್ನಾನ ಮತ್ತು ಸೂರ್ಯ ನಮಸ್ಕಾರದ ಬಳಿಕ ಬಾಗಿನ ಅರ್ಪಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೆಂಕಟನಾರಾಯಣ, ಉಪಾಧ್ಯಕ್ಷರಾದ ದೇ.ತಿ.ನಾಗರಾಜ್‌, ಶಿವಶಂಕರ್‌, ಆಂಧ್ರಪ್ರದೇಶದ ಕಮ್ಮವಾರಿ ಸಂಘದ ಅಧ್ಯಕ್ಷ ರಮೇಶ್‌ ಮೊದಲಾದವರು ಕೂಡ ಕಾವೇರಿ ನದಿಯಲ್ಲಿ ಮಿಂದು ಪವಿತ್ರ ಕಾವೇರಿ ಮತ್ತು ಗಂಗಾ ಜಲದ ಕುಂಭ ಪೂಜೆ ನಡೆಸಿದರು. ಪಟ್ಟಣದ ವೇದಮಾತಾ ಗುರುಕುಲದ ಋಗ್ವೇದ ಘನಪಾಟಿ ಸದಾನಂದ ಜೋಷಿ ತಮ್ಮ ಶಿಷ್ಯರ ಜತೆಗೂಡಿ ವೇದ ಪಠಣ ನಡೆಸಿದರು.

ಯಮುನಾ ಪೂಜೆ, ಆಗರ್ಷಣ ಸೂಕ್ತ ಪಾರಾಯಣ, ಬೃಹಸ್ಪತಿ ಪೂಜೆ, ಗಂಗಾ–ಭಾಗೀರಥಿ ಪೂಜೆ, ಮಹಾ ಸಂಕಲ್ಪ, ಶೋಡಷೋಪಚಾರ ಪೂಜೆ, ಸಾಮೂಹಿಕ ಪ್ರಾರ್ಥನೆ, ಜಲ ತರ್ಪಣ, ಪವಿತ್ರ ತೀರ್ಥ ವಿತರಣೆ, ಮಹಾ ಆರತಿ, ಇತರ ವಿಧಿ, ವಿಧಾನಗಳು ನಡೆದವು.

ADVERTISEMENT

ಪಾವಗಡ ಪ್ರಕಾಶ್‌ ಪುಷ್ಕರದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಬುಧವಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶ್ವಕರ್ಮ ಸಜ್ಜೋತ ಸರಸ್ವತಿ ಸ್ವಾಮೀಜಿ, ಅಗ್ನಿ ಪುಷ್ಕರದ ಕುರಿತು ಮಾತನಾಡಿ, ‘ಮಹಾ ಪುಷ್ಕರದ ಸಂದರ್ಭದಲ್ಲಿ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರೆ ದೈಹಿಕ ಹಾಗೂ ಮಾನಸಿಕ ಶಕ್ತಿ ವರ್ಧಿಸುತ್ತದೆ’ ಎಂದರು.

ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ಪ್ರಾಂತ್ಯ ಕಾರ್ಯವಾಹಕ ಸತ್ಯನಾರಾಯಣರಾವ್‌ ಮಾತನಾಡಿ, ‘ನಾಗರಿಕತೆ ಹೆಚ್ಚಿದಂತೆ ನದಿ ಹಾಗೂ ಇತರ ಜಲ ಮೂಲಗಳು ಕಲುಷಿತವಾಗುತ್ತಿವೆ. ನೀರು ಕುಡಿಯಲು ಯೋಗ್ಯವಲ್ಲದ ರೀತಿ ಬದಲಾಗಿದೆ. ದಕ್ಷಿಣ ಮಾತ್ರವಲ್ಲದೇ ಉತ್ತರದ ನದಿಗಳು ಕೂಡ ಮಲಿನವಾಗುತ್ತಿದ್ದು, ಅವುಗಳ ಪಾವಿತ್ರ್ಯ ಕಾಪಾಡಲು ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಮೇಲುಕೋಟೆಯ ಶ್ರೀನಿವಾಸ್‌, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ಅಭಿನವ ಭಾರತ್‌ ತಂಡದ ಸಂಚಾಲಕ ಕೆ.ಎಸ್‌.ಲಕ್ಷ್ಮೀಶ್‌, ಕೃಷ್ಣಭಟ್‌ ಪಾಲ್ಗೊಂಡಿದ್ದರು. ದಕ್ಷಿಣ ವಲಯ ಐಜಿ ವಿಪುಲ್‌ಕುಮಾರ್‌, ಮಂಡ್ಯ ಎಸ್‌ಪಿ ಜಿ. ರಾಧಿಕಾ ಕೂಡ ಪುಷ್ಕರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.