ADVERTISEMENT

ಬಂಡಾಯ ನಾಯಕರ ಗೆಲುವು ನಿಶ್ಚಿತ: ಬಾಲಕೃಷ್ಣ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 10:00 IST
Last Updated 18 ಏಪ್ರಿಲ್ 2018, 10:00 IST

ಮದ್ದೂರು: ‘ಎಲ್ಲ ಏಳು ಬಂಡಾಯ ಜೆಡಿಎಸ್‌ ನಾಯಕರು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ, ಮದ್ದೂರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಗೆಲುವು–ಸೋಲು ಸಾಮಾನ್ಯ. ಎಲ್ಲರೂ ಪ್ರತಿಸ್ಪರ್ಧಿಗಳನ್ನು ಸೋಲಿಸುವ ಗುರಿಯೊಂದಿಗೆ ಅಖಾಡಕ್ಕೆ ಇಳಿಯುತ್ತಾರೆ. ನಮ್ಮ ವಿರೋಧಿಗಳ ಗುರಿಯೂ ಅದೇ ಆಗಿದೆ. ಆದರೆ ಜನರ ಆರ್ಶಿವಾದ ನಮ್ಮ ಪರ ಇರುವುದರಿಂದ ನಮ್ಮ ಎಲ್ಲ 7 ಬಂಡಾಯ ಶಾಸಕರ ಗೆಲುವು ಶತಸಿದ್ಧ’ ಎಂದರು. ‘ಆದಿಚುಂಚನಗಿರಿ ಮಠದ ವಿಚಾರದಲ್ಲಿ ನಾವು ಯಾವುದೇ ದ್ರೋಹ ಬಗೆದಿಲ್ಲ.

ADVERTISEMENT

ಜೆಡಿಎಸ್‌ ವರಿಷ್ಠರಾದ ದೇವೇಗೌಡರು ಆಯೋಜಿಸಿದ್ದ ಸಭೆಯಲ್ಲಿ ಅವರ ಅಣತಿಯಂತೆ ನಾವು ಪಾಲ್ಗೊಂಡಿದ್ದೆವು, ವಿನಾ ಸ್ವಇಚ್ಛೆಯಿಂದ ಅಲ್ಲ. ಸಭೆ ಆಯೋಜಿಸಿದ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಮಠದ ವಿರುದ್ಧ ಸಂಚು ಮಾಡಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದರು.

ಯಶವಂತಪುರ ಶಾಸಕ ಸೋಮಶೇಖರ್ ಮಾತನಾಡಿ, ‘ಚುನಾವಣೆ ಸ್ಫರ್ಧೆ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆಯುವುದು ವಾಡಿಕೆ. ಆದರೆ ಈ ಬಾರಿ ಹಿತೈಷಿಗಳ ಸಲಹೆಯ ಮೇರೆಗೆ ಹೊಳೆ ಆಂಜನೇಯ ಸ್ವಾಮಿ ದರ್ಶನ ಪಡೆಯಲು ಬಂದಿದ್ದೇನೆ. ದೇವರ ಆಶೀರ್ವಾದದಿಂದ ಗೆಲ್ಲಲಿದ್ದೇನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.