ADVERTISEMENT

ಬತ್ತಿದ ಹೇಮಾವತಿ: ಸಾಲದ ಸುಳಿಯಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:37 IST
Last Updated 20 ಏಪ್ರಿಲ್ 2017, 6:37 IST
ಕೆ.ಆರ್.ಪೇಟೆಯ ದೇವಿರಮ್ಮನ ಕೆರೆ ಬಳಿ ಇರುವ ಬಾವಿ ಒಣಗಿರುವುದು (ಎಡಚಿತ್ರ) ಹೇಮಾವತಿಯ ಒಡಲು  ಬರಿದಾಗಿರುವುದು
ಕೆ.ಆರ್.ಪೇಟೆಯ ದೇವಿರಮ್ಮನ ಕೆರೆ ಬಳಿ ಇರುವ ಬಾವಿ ಒಣಗಿರುವುದು (ಎಡಚಿತ್ರ) ಹೇಮಾವತಿಯ ಒಡಲು ಬರಿದಾಗಿರುವುದು   

ಕೆ.ಆರ್.ಪೇಟೆ: ಸತತ ಮೂರು ವರ್ಷಗಳಿಂದ ವರುಣರಾಯನ ಅವಕೃಪೆಗೆ ಒಳಗಾಗಿರುವ ಕೆ.ಆರ್.ಪೇಟೆ ತಾಲ್ಲೂಕು 60ರ ದಶಕದಲ್ಲಿ ಕಂಡಂಥ ತೀವ್ರತರ ಬರಗಾಲಕ್ಕೆ ತುತ್ತಾಗಿದೆ.ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ತಾಲ್ಲೂಕಿನ ಜನತೆ ಕೈಚೆಲ್ಲಿ ಕುಳಿತಿದ್ದಾರೆ.ಕುಡಿಯುವ ನೀರಿಗಾಗಿ  ಹಪಹಪಿಸುವ ಸ್ಥಿತಿ ಬಂದೊದಗಿದೆ. ಗ್ರಾಮೀಣ ಪ್ರದೇಶದ ಯುವಕರು ಕೆಲಸ ಹುಡುಕಿಕೊಂಡು ನಗರ ಪ್ರದೇಶದತ್ತ ಗುಳೆ ಹೊರಟಿದ್ದಾರೆ.

ತಾಲ್ಲೂಕಿನ ಜೀವನದಿಯಾದ ಹೇಮಾವತಿಯ ಒಡಲು ಬರಿದಾಗುತ್ತಿರುವುದರಿಂದ   ಹೇಮಗಿರಿ ಬಳಿಯಿರುವ  ಕುಡಿಯುವ ನೀರು ಯೋಜನೆಗೆ ನೀರು ದೊರೆಯುತ್ತಿಲ್ಲ. ಪರಿಣಾಮವಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ ವ್ಯಾಪ್ತಿಯ 30 ಗ್ರಾಮಗಳೂ ಸೇರಿದಂತೆ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವುದು ತಾಲ್ಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.  ಜಾಕ್‌ವೆಲ್‌ಗೆ ನೀರು ತಲುಪುವಂತೆ ಮಾಡಲು ಸೀಳುಗಾಲುವೆ ತೋಡಲಾಗುತ್ತಿದ್ದರೂ, ನೀರು ಸರಾಗವಾಗಿ ಹರಿಯುತ್ತಿಲ್ಲ.

ತಾಲ್ಲೂಕಿನಲ್ಲಿ  405 ಗ್ರಾಮಗಳಿವೆ.  2.70 ಲಕ್ಷ ಜನಸಂಖ್ಯೆ ಇದೆ.  ಕೆ.ಆರ್.ಪೇಟೆ ಪಟ್ಟಣದ ಜನಸಂಖ್ಯೆ 30 ಸಾವಿರ ಗಡಿ ದಾಟಿದೆ.ಅರಳದ ಕೃಷಿ–ಸಾಲದ ಸುಳಿಯಲ್ಲಿ ರೈತ: ತಾಲ್ಲೂಕಿನಲ್ಲಿ ಒಟ್ಟು 91,951 ಹೆಕ್ಟೇರ್ ಭೂಮಿ ಇದೆ. ಅದರಲ್ಲಿ 22,254 ಹೆಕ್ಟೇರ್‌ ಕೃಷಿಗೆ ಉಪಯುಕ್ತವಾಗಿಲ್ಲ.  30,176 ಹೆಕ್ಟೇರ್‌ ಭೂಮಿ ನೀರಾವರಿಗೆ ಒಳಪಟ್ಟಿದ್ದರೆ, ಉಳಿದೆಲ್ಲವೂ ಮಳೆಯಾಶ್ರಿತ ಭೂಮಿಯಾಗಿದೆ. ಮಳೆ ಕೊರತೆಯಿಂದಾಗಿ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ತಾಲ್ಲೂಕಿನ ಕೋರಮಂಡಲ ಸಕ್ಕರೆ ಕಾರ್ಖಾನೆಗೆ ಬೇಕಾಗುವಷ್ಟು ಕಬ್ಬು ಬೆಳೆದಿಲ್ಲ.

ADVERTISEMENT

ಎರಡು ವರ್ಷಗಳಲ್ಲಿ 35ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ ಕೊರತೆಯಿಂದ  ಅಡಿಕೆ ಮತ್ತು ತೆಂಗು ಬೆಳೆಗೆ ರೋಗ ತಗುಲಿ ಮರಗಳ ಸುಳಿಯೇ ಒಣಗಿಹೋಗಿದೆ. ಮರಗಳನ್ನು ಕತ್ತರಿಸುವ ಸ್ಥಿತಿ ಅಘಲಯ ಸೇರಿದಂತೆ ಹಲವೆಡೆ ಉಂಟಾಗಿದೆ. ಕಷ್ಟಪಟ್ಟು ಅಡಿಕೆ ಮತ್ತು ತೆಂಗಿನ ಸಸಿ ನೆಟ್ಟು ಬೆಳೆಸಿದವು. ಈಗ ಅವು ಒಣಗಿಹೋಗುತ್ತಿರುವುದು ಕಂಡಾಗ ಸಂಕಟ ಆಗುತ್ತದೆ ಎನ್ನುತ್ತಾರೆ ಅಘಲಯದ ರೈತ ಮಹಿಳೆ ನಾಗಮ್ಮ.

ಟ್ಯಾಂಕರ್ ಗತಿ: ತಾಲ್ಲೂಕಿನಲ್ಲಿ 1,512 ಕೊಳವೆಬಾವಿಗಳಿದ್ದು, ಅದರಲ್ಲಿ 590 ಬತ್ತಿ ಹೋಗಿವೆ. 432 ಕಿರು ನೀರು ಸರಬರಾಜು ಘಟಕಗಳಿದ್ದು,  269 ಕಾರ್ಯ ನಿರ್ವಹಿಸುತ್ತಿವೆ. 221 ಮುಖ್ಯ ನೀರು ಸರಬರಾಜು ಘಟಕವಿದ್ದು, 192 ಕಾರ್ಯ ನಿರ್ಹಿಸುತ್ತಿವೆ. ಅಂತರ್ಜಲ ಕುಸಿತದಿಂದಾಗಿ ನೀರು ಸರಬರಾಜು ಮಾಡುವುದು ಕಷ್ಟವಾಗುತ್ತಿದೆ. ಒಂದು ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ.

ಮೇವಿನ ಅಭಾವ ತೀವ್ರವಾಗಿದೆ.  ತಾಲ್ಲೂಕಿನಲ್ಲಿ ಹಸು, ಕರು, ಎಮ್ಮೆ, ಮೇಕೆ, ಕುರಿ ಸೇರಿದಂತೆ 1,78,803 ವಿವಿಧ ಜಾತಿಯ ಪಶುಗಳಿವೆ. ತಾಲ್ಲೂಕು ಆಡಳಿತವು 40 ಟನ್ ಮೇವು ಸಂಗ್ರಹಣಾ ಕಾರ್ಯ ಮಾಡಿದ್ದರೂ ಅದನ್ನು ಹಂಚುವ ಕಾರ್ಯ ಮಾಡಿಲ್ಲ.    ಗೋಶಾಲೆ ಆರಂಭಿಸುವ,  ಮೇವಿನ ಬ್ಯಾಂಕ್ ಸ್ಥಾಪಿಸುವ ಕೆಲಸ ಆಗಿಲ್ಲ.  ಕಡಿಮೆ ಬೆಲೆಗೆ ಜಾನುವಾರು ಮಾರುವಂತಾಗಿದೆ.ತಾಲ್ಲೂಕಿನಲ್ಲಿ ಹೇಮಾವತಿ ನದಿ ಹರಿದಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಕೆರೆ–ಕಟ್ಟೆಗಳನ್ನು ತುಂಬಿದಸದಿರುವುದರಿಂದ ತೊಂದರೆ ಹೆಚ್ಚಾಗಿದೆ ಎನ್ನುವುದು ರೈತರ ದೂರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.