ADVERTISEMENT

ಬೆಳಕವಾಡಿಯಲ್ಲಿ ಬೆಟ್ಟದಷ್ಟು ಸಮಸ್ಯೆ

ಪ್ರಜಾವಾಣಿ ವಿಶೇಷ
Published 2 ಅಕ್ಟೋಬರ್ 2014, 6:04 IST
Last Updated 2 ಅಕ್ಟೋಬರ್ 2014, 6:04 IST

ಮಳವಳ್ಳಿ: ತಾಲ್ಲೂಕಿನ ಬೆಳಕವಾಡಿಯಲ್ಲಿ 13 ಸಾವಿರ ಜನಸಂಖ್ಯೆ ಇದೆ. 19  ಸದಸ್ಯರಿದ್ದು, ಇದೊಂದೇ ಗ್ರಾಮ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಶುಚಿತ್ವದ ಕೊರತೆ ಗ್ರಾಮವನ್ನು ಕಾಡುತ್ತಿದೆ.

ತಾಲ್ಲೂಕು ಕೇಂದ್ರದಿಂದ 18 ಕಿ.ಮೀ. ದೂರದಲ್ಲಿದೆ. ಇಲ್ಲಿನ ಚರಂಡಿಗಳು ಸ್ವಚ್ಛತೆಯನ್ನೇ ಕಂಡಿಲ್ಲ, ಕಸ ವಿಲೇವಾರಿ ನಿಯಮಿತವಾಗಿ ಆಗುವುದೇ ಇಲ್ಲ. ಗ್ರೇಡ್‌ 1 ಪಂಚಾಯಿತಿ ಕೇಂದ್ರವಾಗಿದ್ದರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಲ್ಲ, ಮಾರುಕಟ್ಟೆ ಇದ್ದರೂ ಪ್ರಯೋಜನವಿಲ್ಲ, ಬಸ್ ನಿಲ್ದಾಣವಿದ್ದರೂ ಮೂಲ ಸೌಲಭ್ಯಗಳಿಲ್ಲ. ಹೀಗೆ, ಗ್ರಾಮದಲ್ಲಿ ಇಲ್ಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಾಲ್ಲೂಕಿನಲ್ಲಿ ಹೆಚ್ಚು ಜನರನ್ನು ಹೊಂದಿರುವ ಪಂಚಾಯಿತಿ ಕೇಂದ್ರವಾಗಿದ್ದರೂ, ಇಲ್ಲಿ ಹೆಚ್ಚಿನ ಸಂದರ್ಭದಲ್ಲಿ ಪ್ರಬಾರ ಅಭಿವೃದ್ಧಿ ಅಧಿಕಾರಿಯೇ ಇರುತ್ತಾರೆ. ಇದರಿಂದ ವಾರದಲ್ಲಿ ಕೆಲವು ದಿನ ಮಾತ್ರ ಅವರು ಬರುವುದರಿಂದ ಸಾಕಷ್ಟು ಕೆಲಸಗಳು ಹಾಗೆಯೇ, ಉಳಿದುಕೊಂಡು ಬಿಡುತ್ತವೆ.

ಗ್ರಾಮದಲ್ಲಿರುವ ಕಸದ ತೊಟ್ಟಿಗಳು ಸಂಪೂರ್ಣ ತುಂಬಿ ಹೋಗಿದ್ದು, ವಿಲೇವಾರಿ ಮಾಡುವವರಿಲ್ಲ. ಇದರಿಂದಾಗಿ ಸುತ್ತಲಿನ ವಾತಾವರಣವೆಲ್ಲ ಗಬ್ಬು ನಾರುತ್ತಿದೆ, ರಸ್ತೆ ಬದಿಯಲ್ಲಿ ಸಂಪೂರ್ಣ ಗಿಡಗಳು ಬೆಳೆದಿವೆ. ಪರಿಣಾಮ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ.

ಗ್ರಾಮದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಆದರೆ, ಪ್ರಯೋಜನವಾಗದೆ  ಪಾಳು ಬಿದ್ದಿದೆ. ಬಸ್ ನಿಲ್ದಾಣದಲ್ಲಿ ಡಾಂಬರು ಮಾಡದ್ದರಿಂದ ಜಲ್ಲಿಕಲ್ಲುಗಳಿಂದ ಕೂಡಿದೆ. ಬಸ್‌ ಬಂದಾಗ ದೂಳು ಎದ್ದು, ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಗ್ರಾಮದ ಕೆರೆಯಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿದೆ. ಇದನ್ನೇ ಆಶ್ರಯಿಸಿದ್ದ ರೈತರಿಗೆ ತೊಂದರೆಯಾಗುತ್ತಿದೆ. ಕೆರೆ ಏರಿ ಮೇಲೆ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ವಾತಾವರಣವೆಲ್ಲ ಕಲುಷಿತಗೊಂಡಿದೆ.

ಕಾನೂನು ಸಲಹಾ ಕೇಂದ್ರವಿದ್ದು, ಅದಕ್ಕೆ ಹೋಗುವ ದಾರಿಯಲ್ಲಿ ಗಿಡಗಳು ಬೆಳೆದು ನಿಂತಿದೆ. ಉಪಯೋಗ ಮಾಡದ್ದರಿಂದ ಕಟ್ಟಡ ಅನಾಥವಾಗಿದೆ.

ಗ್ರಾಮದ ಪ್ರಮುಖ ವೃತ್ತದಲ್ಲಿ ಇರುವ ಹೈಮಾಸ್ಟ್‌ ದೀಪ ಹಗಲು ವೇಳೆಯೂ ಹೊತ್ತಿಕೊಂಡಿರುತ್ತದೆ. ಇದರಿಂದ ವಿದ್ಯುತ್‌ ವ್ಯರ್ಥವಾಗುತ್ತಿದೆ. ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಈ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಗ್ರಾಮಸ್ಥರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.