ADVERTISEMENT

ಬೆಳೆ, ಬರ ಪರಿಹಾರ ಬಿಡುಗಡೆಗೆ ಆಗ್ರಹ

ತೋಟಗಾರಿಕೆ ಫಾರಮ್‌ಗೆ ಅಭಿವೃದ್ಧಿ ಆಯುಕ್ತ ಭೇಟಿ, ಪಾಲಿಹೌಸ್, ಕೃಷಿ ಹೊಂಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:41 IST
Last Updated 12 ಜನವರಿ 2017, 6:41 IST
ಮದ್ದೂರು ಪಟ್ಟಣದ ತೋಟಗಾರಿಕೆ ಇಲಾಖೆ ಫಾರಂಗೆ ಬುಧವಾರ ಭೇಟಿ ನೀಡಿದ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಟಿ.ಎಂ. ವಿಜಯಭಾಸ್ಕರ್ ಕೃಷಿ ಹೊಂಡವನ್ನು ವೀಕ್ಷಿಸಿದರು
ಮದ್ದೂರು ಪಟ್ಟಣದ ತೋಟಗಾರಿಕೆ ಇಲಾಖೆ ಫಾರಂಗೆ ಬುಧವಾರ ಭೇಟಿ ನೀಡಿದ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಟಿ.ಎಂ. ವಿಜಯಭಾಸ್ಕರ್ ಕೃಷಿ ಹೊಂಡವನ್ನು ವೀಕ್ಷಿಸಿದರು   

ಮದ್ದೂರು: ಪಟ್ಟಣದ ತೋಟಗಾರಿಕೆ ಇಲಾಖೆ ಫಾರಮ್‌ಗೆ ಬುಧವಾರ ರಾಜ್ಯ ಹೆಚ್ಚುವರಿ  ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಟಿ.ಎಂ. ವಿಜಯಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಫಾರಂನೊಳಗೆ ನಿರ್ಮಿಸಲಾದ ಕೃಷಿ ಹೊಂಡವನ್ನು  ವೀಕ್ಷಿಸಿದ ಅವರು, ಬಳಿಕ ನರ್ಸರಿ, ಪಾಲಿ ಹೌಸ್ ಹಾಗೂ ಬಾಳೆ, ಸಪೋಟಾ, ಮಾವಿನ ತೋಟವನ್ನು ವೀಕ್ಷಿಸಿ ಅಧಿಕಾರಿಗಳಿಂದ ವಿವಿಧ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ಪಡೆದರು.

ಆಗ್ರಹ: ಬಳಿಕ ಅಲ್ಲಿಂದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ವಿಜಯಭಾಸ್ಕರ್ ಅವರನ್ನು  ರೈತ ಸಂಘದ ಕೋಣಸಾಲೆ ನರಸರಾಜು, ತಾಲ್ಲೂಕು ಅಧ್ಯಕ್ಷ  ಜಿ.ಎ.ಶಂಕರ್ ಇತರರು ಭೇಟಿ ಮಾಡಿದರು.

ತೀವ್ರ ಬರಗಾಲದಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕ ಸಿಲುಕಿದ್ದಾರೆ ಯಾವುದೇ ಕಾರಣಕ್ಕೂ ಬ್ಯಾಂಕುಗಳು ನೋಟಿಸ್ ನೀಡದಂತೆ ಸೂಚನೆ ನೀಡಬೇಕು. ರೈತ ಸಂಕಷ್ಟ ನಿವಾರಣೆಗೆ  ಕೂಡಲೇ  ಬೆಳೆ ಹಾಗೂ ಬರ ಪರಿಹಾರವನ್ನು ತತ್‌ಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಜಾನುವಾರುಗಳನ್ನು ತೊಳೆಯಲು ಕೂಡ ನೀರಿಲ್ಲ. ಹೀಗಾಗಿ ಸಂಕ್ರಾಂತಿ ಹಬ್ಬದ ವೇಳೆಗೆ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಜಯ ಭಾಸ್ಕರ್‌, ನಿಮ್ಮ ಬೇಡಿಕೆಗಳನ್ನು ಕೂಡಲೇ ಸರ್ಕಾರದ ಗಮನಕ್ಕೆ ತರುತ್ತೇನೆ. ಎಂತಹ ಸಂಕಷ್ಟದಲ್ಲೂ ರೈತರು ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಕೈ ಹಾಕಬಾರದು. ಈ ವಿಚಾರದಲ್ಲಿ ರೈತ ಸಂಘವು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಭೇಟಿ: ಬಳಿಕ ಅಲ್ಲಿಂದ ಕೆಸ್ತೂರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿ ಕೆಲ ರೈತರನ್ನು ಭೇಟಿ ಮಾಡಿ ರೈತ ಸಂಪರ್ಕ ಕೇಂದ್ರದಿಂದ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ದೊರಕುತ್ತಿವೆಯೇ ? ಎಂಬುದರ ಬಗೆಗೆ ಪ್ರಶ್ನಿಸಿ ಮಾಹಿತಿ ಪಡೆದರು.

ಕೃಷಿ ನಿರ್ದೇಶಕ ಗಂಗಪ್ಪ, ಉಪನಿರ್ದೇಶಕರಾದ ಮಂಜುನಾಥ ಅಂಗಡಿ, ರುದ್ರೇಶ್, ಕೃಷಿ ಜಂಟಿ ನಿರ್ದೇಶಕರಾದ ರಾಜೀವ ಸುಲೋಚನಾ, ರವಿ,  ಹೆಚ್ಚುವರಿ ತೋಟಗಾರಿಕೆ ನಿರ್ದೇಶಕ ಶಿವಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ವೇತಕ್, ಸಹಾಯಕ ಅಧಿಕಾರಿಗಳಾದ ಶಾಂತರಾಜು, ಸಂಪತ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.