ADVERTISEMENT

ಭವಿಷ್ಯ ರೂಪಿಸುವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಿ

‘ಪಿಯುಸಿ ನಂತರ ಮುಂದೇನು?’ ಕಾರ್ಯಕ್ರಮದಲ್ಲಿ ಪರೀಕ್ಷಾ ಪ್ರಾಧಿಕಾರದ ಪಿಆರ್ಒ ರವಿಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:06 IST
Last Updated 15 ಮೇ 2017, 7:06 IST
ಮಂಡ್ಯ: ಪಿಯುಸಿ ನಂತರ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಭವಿಷ್ಯ ರೂಪಿಸುವ ಕೋರ್ಸ್‌ಗೆ ಆದ್ಯತೆ ಕೊಡಬೇಕು  ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿಕುಮಾರ್‌ ಹೇಳಿದರು.
 
ಯುವ ಕರ್ನಾಟಕ ವಿದ್ಯಾರ್ಥಿ ಕ್ರಿಯಾ ಸಮಿತಿ, ಐಎಸ್‌ಸಿಕೆ ಸಂಘಟನೆಯಿಂದ ಭಾನುವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಸಿಇಟಿ ನಂತರ ಮುಂದೇನು?’ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
 
‘ಎಂಜಿನಿಯರಿಂಗ್‌ನಲ್ಲಿ ಹಲವು ವಿಭಾಗಗಳಿದ್ದು ಅವುಗಳ ಬಗ್ಗೆ ಮಾಹಿತಿ ಪಡೆಯಬೇಕು. ಏರೋನಾಟಿಕಲ್‌, ಆರ್ಕಿಟೆಕ್ಚರ್‌, ಕಮ್ಯುನಿಕೇಷನ್‌, ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಅಪಾರ ಬೇಡಿಕೆ ಇದೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದರೆ ಉತ್ಪಾದನಾ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಇಸ್ರೊ, ಬೆಮೆಲ್‌, ಎಚ್‌ಎಎಲ್‌ ಮುಂತಾದೆಡೆ ಉದ್ಯೋಗ ದೊರೆಯುತ್ತದೆ’ ಎಂದು ಹೇಳಿದರು.
 
‘ಎಂಜಿನಿಯರಿಂಗ್ ಕಲಿತ ವಿದ್ಯಾರ್ಥಿಗಳು ಸ್ಟಾರ್ಟ್‌ಅಪ್‌ ಆರಂಭಿಸಬಹುದು. ಕೇವಲ ಸರ್ಕಾರಿ ಉದ್ಯೋಗ ಹಾಗೂ ಐಟಿ ಕಂಪೆನಿಗಳಲ್ಲಿ ಉದ್ಯೋಗ ಹುಡುಕುವ ಬದಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಸ್ವಂತ ಉದ್ಯೋಗ ಮಾಡಬಹುದು’ ಎಂದು ಹೇಳಿದರು.
 
‘ಸರ್ಕಾರಿ ಕೋಟಾದಡಿ ಶೇ 45, ಕಾಮೆಡ್‌ ಕೆ ಕೋಟಾದಡಿ ಶೇ 30 ಹಾಗೂ ಮ್ಯಾನೇಜ್‌ಮೆಂಟ್‌ ಕೋಟಾದಡಿ ಶೇ 25ರಷ್ಟು ಸೀಟುಗಳನ್ನು ದಾಖಲು ಮಾಡಿಕೊಳ್ಳಲಾಗುವುದು. ಶೇ 5ರಷ್ಟು ಸೀಟುಗಳು ಸೂಪರ್‌ನ್ಯೂಮರಿಕ್‌ ಕೋಟಾದಡಿ ಸಿಗುತ್ತವೆ.
 
ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಲ್ಲಿರುವ ಮೂಲ ಸೌಲಭ್ಯ, ಉಪನ್ಯಾಸಕ ಸಿಬ್ಬಂದಿ, ಕ್ಯಾಂಪಸ್‌ ಸಂದರ್ಶನ, ರ್‌್ಯಾಂಕಿಂಗ್‌ ಕುರಿತು ಹಿರಿಯ ವಿದ್ಯಾರ್ಥಿಗಳ ಜೊತೆ ಮಾತನಾಡಿ ನಿರ್ಧಾರ ಮಾಡಬೇಕು’ ಎಂದು ಸಲಹೆ ನೀಡಿದರು.
 
ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಚಂದ್ರಹಾಸ, ‘ವೃತ್ತಿಪರ ಕೋರ್ಸ್‌ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ವತಿಯಿಂದ ಹಲವು ಸಾಲ ಸೌಲಭ್ಯಗಳು ದೊರೆಯುತ್ತಿವೆ. ಅವುಗಳ ಮಾಹಿತಿ ಪಡೆದು ಸದುಪಯೋಗ ಮಾಡಿಕೊಳ್ಳಬೇಕು. ಸಾಲ ಪಡೆಯುವಾಗ ಬಡ್ಡಿ ದರ, ಮರುಪಾವತಿಯ ವಿವರ ಪಡೆಯಬೇಕು’ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಸಿಇಟಿ ಕೌನ್ಸೆಲಿಂಗ್‌ಗೆ ಅಗತ್ಯವಿರುವ ದಾಖಲೆಗಳು ಹಾಗೂ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬ ಕುರಿತು ಮಾಹಿತಿ ನೀಡಲಾಯಿತು. 
 
ಚನ್ನಪಟ್ಟಣದ ಒಕ್ಕಲಿಗರ ಪದವಿ ಪೂರ್ವ ಕಾಲೇಜು ಉಪ ಪ್ರಾಚಾರ್ಯ ದೊಡ್ಡೇಗೌಡ, ಯುವ ಕರ್ನಾಟಕ ವಿದ್ಯಾರ್ಥಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಚಿಕ್ಕ ಮಳವೇಗೌಡ,  ವರುಣ್‌, ವಿಜಯ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.