ADVERTISEMENT

ಮಂಡ್ಯದಲ್ಲಿ ‘ಯುಪಿ ಬೆಲ್ಲ’ದ್ದೇ ಕಾರುಬಾರು!

ರಾಸಾಯನಿಕಗಳ ಬಳಕೆ, ಸ್ಥಳೀಯ ನಾಡ ಒಲೆ ಬೆಲ್ಲಕ್ಕೆ ಇಲ್ಲ ಬೆಲೆ

​ಪ್ರಜಾವಾಣಿ ವಾರ್ತೆ
Published 9 ಮೇ 2017, 7:36 IST
Last Updated 9 ಮೇ 2017, 7:36 IST
ಮಂಡ್ಯದಲ್ಲಿ ‘ಯುಪಿ ಬೆಲ್ಲ’ದ್ದೇ ಕಾರುಬಾರು!
ಮಂಡ್ಯದಲ್ಲಿ ‘ಯುಪಿ ಬೆಲ್ಲ’ದ್ದೇ ಕಾರುಬಾರು!   
l ಎಂ.ಎನ್‌.ಯೋಗೇಶ್‌
 
ಮಂಡ್ಯ: ನಗರದ ಎಪಿಎಂಸಿಯ ಬೆಲ್ಲದ ಮಾರುಕಟ್ಟೆಯಲ್ಲಿ ಯು.ಪಿ. ಬೆಲ್ಲದ್ದೇ ಕಾರುಬಾರು. ಕಬ್ಬಿನ ಕೊರತೆ, ಸ್ಥಳೀಯ ಕಾರ್ಮಿಕರ ನಿರಾಸಕ್ತಿಯಿಂದಾಗಿ ಶೇ 90ರಷ್ಟು ಮಾರುಕಟ್ಟೆಯನ್ನು ಎಲ್ಲಿಂದಲೋ ಬಂದ ಗುತ್ತಿಗೆದಾರರು ಆವರಿಸಿಕೊಂಡಿದ್ದಾರೆ.
 
ಉತ್ತರ ಪ್ರದೇಶದಿಂದ ಬಂದ ಕಬ್ಬಿನ ಗುತ್ತಿಗೆದಾರರು ಜಿಲ್ಲೆಯ ಆಲೆಮನೆ ವ್ಯವಸ್ಥೆ ಬದಲಿಸಿದ್ದಾರೆ. ಇಲ್ಲಿರುವ ಕಾರ್ಮಿಕರ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಯು.ಪಿ. ಗುತ್ತಿಗೆದಾರರು ಅಲ್ಲಿಂದಲೇ ಕಾರ್ಮಿಕರನ್ನು ಕರೆತಂದು ಸ್ಥಳೀಯ ಕಬ್ಬಿನಗದ್ದೆಗಳನ್ನು ಗುತ್ತಿಗೆ ಹಿಡಿದಿದ್ದಾರೆ. ನಾಲ್ಕು ಕೊಪ್ಪರಕೆಗಳಲ್ಲಿ ಹಾಲು ಕಾಯಿಸಿ ದಿನಕ್ಕೆ 10–12 ಕ್ವಿಂಟಲ್ ಬೆಲ್ಲ ತೆಗೆಯುವ ಅವರು ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಎಪಿಎಂಸಿಯಲ್ಲಿ  ‘ಯು.ಪಿ. ಬೆಲ್ಲ’ ಎಂಬ ಹೊಸ ಹೆಸರನ್ನೇ ಸೃಷ್ಟಿಸಿಕೊಂಡಿದ್ದಾರೆ.
 
ರಾಸಾಯನಿಕ ಬಳಕೆ: ಬೆಲ್ಲದ  ಬಣ್ಣಕ್ಕೆ ಮಹತ್ವ ಕೊಡುವ ಯು.ಪಿ. ಕಾರ್ಮಿಕರು ಗುಣಮಟ್ಟ ನಿರ್ಲಕ್ಷಿಸಿದ್ದಾರೆ  ಎಂಬುದು ಸ್ಥಳೀಯರ ವ್ಯಾಪಾರಿಗಳ ಆರೋಪ  ‘ಏಕಕಾಲದಲ್ಲಿ ನಾಲ್ಕು ಕೊಪ್ಪರಿಕೆ ಇಟ್ಟುಕೊಂಡು ಹಾಲು ಕರೆಯುತ್ತಾರೆ. ಗುಣಮಟ್ಟಕ್ಕೆ ಅವರು ಆದ್ಯತೆ ಕೊಡುವುದಿಲ್ಲ.

ಬಣ್ಣಕ್ಕಾಗಿ ಕಬ್ಬಿನ ಜೊತೆಗೆ ಬೆಂಡೆಕಾಯಿ ಕಡ್ಡಿ ಅರೆಯುತ್ತಾರೆ. ಇದರಿಂದ ಬೆಲ್ಲ ಬಣ್ಣಗಟ್ಟುತ್ತದೆ’ ಎಂದು ಮಾರುಕಟ್ಟೆಯ ಹಮಾಲಿ ಬಸವರಾಜು ಹೇಳಿದರು.
 
‘ಬೆಲ್ಲಕ್ಕೆ ಆ್ಯಸಿಡ್‌ ಕೂಡ ಹಾಕುತ್ತಾರೆ. ಗಟ್ಟಿಯಾಗಿ ಬರಲಿ ಎಂದು ಸಕ್ಕರೆಯನ್ನೂ ಮಿಶ್ರಣ ಮಾಡುತ್ತಾರೆ. ಯು.ಪಿ. ಬೆಲ್ಲದ ಘಟಕಗಳ ಮುಂದೆ ಹೋಗಿ ನಿಂತರೆ ನಮ್ಮ ಬೆಲ್ಲದ ಪರಿಮಳ ಇರುವುದಿಲ್ಲ. ಬರಿ ರಾಸಾಯನಿಕಗಳ ವಾಸನೆ ಬರುತ್ತದೆ’ ಎಂದು ಮಾರುಕಟ್ಟೆಯಲ್ಲಿ ಗುಮಾಸ್ತರೊಬ್ಬರು ತಿಳಿಸಿದರು.
 
ನಾಡ ಒಲೆ ಬೆಲ್ಲ ಮಾಯ: ನಾಡ ಒಲೆ ಬೆಲ್ಲವನ್ನು ನಮ್ಮ ಸ್ಥಳೀಯ ಕಾರ್ಮಿಕರು ತಯಾರಿಸುತ್ತಾರೆ. ಈ ಬೆಲ್ಲ ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ. ಇಲ್ಲಿ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವ ಕಾರಣ ಹೆಚ್ಚು ಬೆಲ್ಲ ತಯಾರಿಸಲು ಸಾಧ್ಯವಿಲ್ಲ.
 
ಹೆಚ್ಚೆಂದರೆ ದಿನಕ್ಕೆ ಮೂರರಿಂದ ನಾಲ್ಕು ಕ್ವಿಂಟಲ್‌ ಬೆಲ್ಲ ತಯಾರಿಸಬಹುದು. ಹೀಗಾಗಿ ಮಾರುಕಟ್ಟೆಗೆ ಬರುವ ಹೆಚ್ಚು ಬೆಲ್ಲದಲ್ಲಿ ಯು.ಪಿ. ಬೆಲ್ಲವೇ ಶೇ 90ರಷ್ಟಿರುತ್ತದೆ. 
 
‘ವಾಸನೆ ಮತ್ತು ರುಚಿಯಲ್ಲೇ ಬೆಲ್ಲದ ಗುಣಮಟ್ಟ ಪರೀಕ್ಷೆ ಮಾಡಬಹುದು. ನಮ್ಮ ನಾಡ ಒಲೆ ಬೆಲ್ಲ ತಿಂದು ನೋಡಿದರೆ ರುಚಿಯಾಗಿರುತ್ತದೆ. ಆದರೆ ಯು.ಪಿ. ಬೆಲ್ಲದಲ್ಲಿ ರಾಸಾಯನಿಕ ಇರುವುದರಿಂದ ಉಪ್ಪುಪ್ಪಾಗಿರುತ್ತದೆ’ ಎಂದು ವ್ಯಾಪಾರಿ ನಾರಾಯಣಗೌಡ ತಿಳಿಸಿದರು.
 
‘ಎಪಿಎಂಸಿಗೆ ಬರುವ ಯು.ಪಿ. ಬೆಲ್ಲವನ್ನು ಪರೀಕ್ಷಿಸಿ ನೋಡಿದರೆ ಗುಣಮಟ್ಟದ ಗೊತ್ತಾಗುತ್ತದೆ. ಗುಣಮಟ್ಟ ಪರೀಕ್ಷಿಸುವ ವ್ಯವಸ್ಥೆ ಎಪಿಎಂಸಿಗೆ ಬರಬೇಕು’ ಎಂದು ಮಾರುಕಟ್ಟೆಯ ಬಿಲ್‌ ಬರಹಗಾರ ಬೋರೇಗೌಡ ತಿಳಿಸಿದರು.
 
ಅಚ್ಚುಬೆಲ್ಲ, ಬಾಕ್ಸ್‌ ಬೆಲ್ಲ, ಕುರಿಕಾಲಚ್ಚು ಬೆಲ್ಲ ಹಾಗೂ ಬಕೆಟ್‌ ಬೆಲ್ಲ ನಗರದ ಎಪಿಎಂಸಿಯಲ್ಲಿ ಮಾರಾಟವಾಗುವ ನಾಲ್ಕು ರೀತಿಯ ಬೆಲ್ಲ. ಇವು ಯು.ಪಿ. ಮತ್ತು ನಾಡ ಒಲೆ ಬೆಲ್ಲದ ವಿವಿಧ ಜಾತಿಗಳು.
 
ಬೆಲೆ ಹೆಚ್ಚಳ: ಬರಗಾಲ ಹಾಗೂ ಕಬ್ಬಿನ ಕೊರತೆಯಿಂದಾಗಿ ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕೊಂಚ ಜಾಸ್ತಿಯೇ ಇದೆ. ಪ್ರತಿದಿನ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಬೆಲ್ಲದ ಬೆಲೆ ನಿರ್ಧಾರವಾಗಲಿದೆ.
****
ಗುಜರಾತ್‌ನಲ್ಲಿ ಮಂಡ್ಯ ಬೆಲ್ಲ ನಿಷಿದ್ಧ
ಹೈದರಾಬಾದ್‌ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಮಂಡ್ಯದಲ್ಲಿ ತಯಾರಾಗುವ ಬೆಲ್ಲಕ್ಕೆ ಅಪಾರ ಬೇಡಿಕೆ ಇತ್ತು. ಆದರೆ 2002ರಿಂದೀಚೆಗೆ ಗುಜರಾತ್‌ನಲ್ಲಿ ಮಂಡ್ಯ ಬೆಲ್ಲಕ್ಕೆ ನಿಷೇಧ ಹೇರಲಾಗಿದೆ.

‘ಗುಣಮಟ್ಟದ ಪರೀಕ್ಷೆಯಲ್ಲಿ ಮಂಡ್ಯದ ಯು.ಪಿ.ಬೆಲ್ಲದಲ್ಲಿ ಹೆಚ್ಚು ರಾಸಾಯನಿಕ ಇದೆ ಎಂದು ದೃಢ ಪಟ್ಟಿದೆ. ಅವರು ಇಲ್ಲಿಯ ಬೆಲ್ಲವನ್ನು ಹಳ್ಳ ತೋಡಿ ಮುಚ್ಚಿ ಹಾಕಿದ್ದಾರೆ’ ಎಂದು ರೈತ ಶಿವಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.