ADVERTISEMENT

ಮಹಿಳೆಯರ ಕಡೆಗಣನೆ; ವಿಷಾದ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 9:22 IST
Last Updated 2 ಮಾರ್ಚ್ 2017, 9:22 IST

ಭಾರತೀನಗರ (ಭಾರತೀ ವೇದಿಕೆ): ಮಹಿಳೆಯರ ಬದುಕು ದಿನನಿತ್ಯದ ದುಡಿಮೆಯಲ್ಲಿ ಕರಗಿ ಹೋಗುತ್ತಿದೆ ಎಂದು ಕನ್ನಡ ಪ್ರಾಧ್ಯಾಪಕಿ ಪ್ರೊ.ಶ್ರೀಲತಾ ಅಭಿಪ್ರಾಯಪಟ್ಟರು.

ಇಲ್ಲಿನ ಭಾರತೀ ಕಾಲೇಜು ಆವರಣ ದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಚಿಂತನಗೋಷ್ಠಿಯಲ್ಲಿ ‘ದುಡಿಯುವ ಮಹಿಳೆಯರ ಸಮಸ್ಯೆಗಳು’ ಕುರಿತು ಮಾತನಾಡಿದರು.

ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಈ ಸಮ್ಮೇಳನದ ವೇದಿಕೆಯ ಬ್ಯಾನರಿನಲ್ಲಿಯೂ ಮಹಿಳಾ ಸಾಧಕರನ್ನು ಕಡೆಗಣಿಸಿರುವುದು ಇದಕ್ಕೆ ಸ್ಪಷ್ಟ ನಿದರ್ಶನ ಎಂದರು.

ಕೃಷಿ ಮತ್ತು ರೈತರ ಹೋರಾಟಗಳ ಕುರಿತು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ರೈತರ ಸಾಲಕ್ಕೆ ಸರ್ಕಾರವೇ ಹೊಣೆ. ಬಂಡವಾಳವಾಹಿಗಳಿಂದ ಸರ್ಕಾರಕ್ಕೆ ಮೋಸವಾಗುತ್ತಿದೆ ಹೊರತು ರೈತರಿಂದಲ್ಲ ಎಂದರು.

‘ತಾಲ್ಲೂಕಿನ ಇತಿಹಾಸ ಮತ್ತು ಯುವಜನರ ಪಾತ್ರ’ ಕುರಿತು ಉಪನ್ಯಾಸಕ ಎಚ್.ಪಿ.ನಾಗರಾಜು ಮಾತನಾಡಿ, ಜಗತ್ತಿನ ಹಸಿವು ನೀಗಿಸಲು ರೈತನಿಂದ ಮಾತ್ರ ಸಾಧ್ಯ. ಯಾವ ತಂತ್ರಜ್ಞಾನ ಮತ್ತು ಕಂಪ್ಯೂಟರ್‌ಗಳು ಅನ್ನ ನೀಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸಾಹಿತ್ಯ, ನಮ್ಮ ಭಾಷೆ, ನಮ್ಮ ನುಡಿ ಸಾಕಾರವಾಗಲು ರೈತ ಸಂಸ್ಕೃತಿಯತ್ತ ಹೆಚ್ಚು ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಹಿತ್ಯ ಮತ್ತು ಜನಪದ ಕಲೆಗಳ ಕುರಿತು ಎಚ್.ಎಂ.ನಾಗೇಶ್ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಎಚ್.ಬಿಳೀಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ತೈಲೂರು ವೆಂಕಟಕೃಷ್ಣ ಚಿಂತನಗೋಷ್ಠಿ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.