ADVERTISEMENT

ಮೇಲುಕೋಟೆ ಕ್ಷೇತ್ರದಲ್ಲಿ ನಾಯಕತ್ವ ಗೊಂದಲ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:13 IST
Last Updated 28 ಮೇ 2017, 6:13 IST

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಗೊಂದಲ ಮತ್ತು ಕೊರತೆ ಇರುವುದರಿಂದ ಪಕ್ಷಕ್ಕೆ ಶಾಸಕ ಸ್ಥಾನ ದೊರೆಯುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶನಿವಾರ ರೈತ ಮತ್ತು ಕೃಷಿ ಕಾರ್ಮಿಕ ಕಾಂಗ್ರೆಸ್ ತಾಲ್ಲೂಕು ಘಟಕ ಉದ್ಫಾಟಿಸಿ  ಮಾತನಾಡಿದರು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಪಕ್ಷ ಬೆಂಬಲಿಸುವ ಜನರು ಮತ್ತು ಮತ ದಾರರೂ ಇದ್ದಾರೆ. ಆದರೆ, ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಮುನ್ನಡೆಸುವ ನಾಯಕನ ಕೊರತೆ ಇದೆ.

ಅಲ್ಲದೆ, ನಾಯಕತ್ವದ ಬಗ್ಗೆ ಗೊಂದಲವೂ ಇದೆ. ಹೀಗಾಗಿ, ಇಲ್ಲಿ ಪಕ್ಷ ದುರ್ಬಲವಾಗಿದೆ. ಇಂತಹ ವಾತಾವರಣದಲ್ಲಿ ಈ ಕಾರ್ಯ ಕ್ರಮ ಆಯೋಜನೆ ಮಾಡಿರುವುದೇ ಕಾರ್ಯಕರ್ತರಿಗೆ ಒಂದು ಸಂಭ್ರಮ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ನಿಂದ ಅಧಿಕಾರ ಅನುಭವಿಸಿದವರು ಮತ್ತು ಲಾಭ ಪಡೆದುಕೊಂಡವರು ಪಕ್ಷಕ್ಕೆ ನಿಷ್ಠೆಯಿಂದ ದುಡಿಯಬೇಕು. ಇಲ್ಲಿನ ಮುಖಂಡರು ಜೂನ್‌ ತಿಂಗಳ ಅಂತ್ಯದೊಳಗೆ ಬೂತ್ ಮಟ್ಟದ ಸಮಿತಿ ರಚಿಸುವ ಹೊಣೆ ಹೊರಬೇಕು ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ‘ಕೃಷಿ ಸಾಲಮನ್ನಾ ಮಾಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು. ಇಲ್ಲಿನ ಸಕ್ಕರೆ ಕಾರ್ಖಾನೆಗಳು ಪ್ರಾರಂಭ ಗೊಳ್ಳುವಂತಾದರೆ ಜಿಲ್ಲೆಯ ಜನತೆ ಉಳಿಯಲು ಸಾಧ್ಯ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ದಿನೇಶ್‌ ಗುಂಡೂರಾವ್ ಅವರಿಗೆ ಮನವಿ ಮಾಡಿದರು.

ತಾಲ್ಲೂಕಿನ ಹಿರಿಯ ಕಾಂಗ್ರೆಸ್ ಮುಖಂಡರಿಗೆ ಸನ್ಮಾನಿಸಲಾಯಿತು. ಕಾಂಗ್ರೆಸ್‌ ರೈತ ಮತ್ತು ಕೃಷಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನ್‌ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಯುವ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಎಚ್.ಕೃಷ್ಣೇ ಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್.ಸಿ.ಮಂಜುನಾಥ್, ‘ಮನ್‌ಮುಲ್‌’ ಉಪಾಧ್ಯಕ್ಷ ಜಿ.ಇ.ರವಿಕುಮಾರ್, ತಾ.ಪಂ ಸದಸ್ಯೆ ಶೋಭಾ ಕುಮಾರ್, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.