ADVERTISEMENT

ರಜೆಯಲ್ಲೂ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು!

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 8:28 IST
Last Updated 11 ನವೆಂಬರ್ 2017, 8:28 IST

ಕೆರಗೋಡು: ಸಮೀಪದ ಹನಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರು ಸದಾ ಉತ್ಸಾಹದ ಚಿಲುಮೆಯಂತಾಗಿದ್ದಾರೆ. ದಸರಾ ರಜೆ, ಬೇಸಿಗೆ ರಜೆ ಬಂದರೂ ಶಾಲೆಗೆ ಬರುವ ಶಿಕ್ಷಕರು ಹಿಂದುಳಿದ ಮಕ್ಕಳ ಕಲಿಕೆಗೆ ವಿಶೇಷ ಆಸಕ್ತಿ ನೀಡುತ್ತಾರೆ. ಜತೆಗೆ ಕಂಪ್ಯೂಟರ್ ಶಿಕ್ಷಣವನ್ನೂ ನೀಡುತ್ತಾರೆ.

ಶಾಲೆಯಲ್ಲಿ ಪುಟ್ಟದಾದ ಹಸಿರು ವನ ನಿರ್ಮಿಸಿದ್ದು, ಇದರ ಜತೆ ತೆಂಗಿನ ಮರಗಳು 7, ಅಶೋಕ ಮರಗಳು 24, ನುಗ್ಗೇಗಿಡ 3, ನೇರಳೆ ಮರ 1, ಬಾಳೆಗಿಡ 3, ದಾಳಿಂಬೆ 2, ಪಪ್ಪಾಯ 1, ಸಿಲ್ವರ್ 1 ಮರಗಳಿವೆ. ಜತೆಗೆ ಚಪ್ಪರದವರೆ ಬಳ್ಳಿ ಹರಡುವ ಮೂಲಕ ಶಾಲೆ ಹಸಿರಿನಿಂದ ಕಂಗೊಳಿಸುತ್ತಿದೆ.

ನಿತ್ಯ ಪ್ರಾರ್ಥನೆ, ದಿನಪತ್ರಿಕೆ ಓದುವುದು, ಪ್ರತಿಜ್ಞಾವಿಧಿ ಬೋಧನೆ ಸೇರಿ ಹಲವು ಚಟುವಟಿಕೆ ನಡೆಸುತ್ತಾರೆ. ಶಿಸ್ತಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಬಳಿಕ ತರಗತಿಯಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣ ನೀಡುತ್ತಾರೆ.ಮಕ್ಕಳು ಖುಷಿಯಲ್ಲಿ ಶಿಕ್ಷಕರ ಜತೆ ಮುಕ್ತವಾಗಿ ಮಾತನಾಡುತ್ತಾ ಕಲಿಯುತ್ತಾರೆ.

ADVERTISEMENT

‘ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಶಾಲೆಯ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿದ್ದು ಇದೀಗ 101 ಮಕ್ಕಳು ಇದ್ದಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಮೇಗೌಡ ಹೇಳಿದರು.

ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಗ್ರಾಮಸ್ಥರನ್ನು ಶಾಲೆಯ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುತ್ತಾರೆ. ಇದರ ಫಲವಾಗಿ ಶಾಲೆಗೆ ದಾನಿಗಳು, ಸಂಘಸಂಸ್ಥೆಗಳು ಸುಮಾರು ಮೂರು ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳನ್ನು ನೀಡಿದ್ದಾರೆ. ಕಂಪ್ಯೂಟರ್, ವಾಟರ್ ಫಿಲ್ಟರ್, ಯುಪಿಎಸ್, ಟಿವಿ, ಎಜುಸ್ಯಾಟ್ ಅಳವಡಿಕೆ, ಟೇಬಲ್‌ಗಳು, ಗ್ಲಾಸ್, ಸೌಂಡ್ ಸಿಸ್ಟಂ, ಆಡಿಯೋ ಸ್ಪೀಕರ್‌ಗಳು, ವ್ಹೀಲ್‌ ಛೇರ್, ಕುಕ್ಕರ್, ಡಯಾಸ್, ಪ್ರೊಜೆಕ್ಟರ್, ಗ್ರೀನ್‌ಬೋರ್ಡ್, ಮೈಕ್ ಸ್ಟ್ಯಾಂಡ್, ಚಿತ್ರಪಟಗಳನ್ನು ನೀಡಿದ್ದಾರೆ. ಜತೆಗೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೋಟ್‌ಬುಕ್‌ಗಳು, ಪೆನ್, ಪೆನ್ಸಿಲ್‌ಗಳು,ವಾಟರ್‌ ಬಾಟಲ್‌ಗಳು ಮತ್ತು ಜಾಮಿಟ್ರಿ ಬಾಕ್ಸ್‌ಗಳನ್ನು ನೀಡಿದ್ದಾರೆ.

‘ನಮ್ಮ ಗ್ರಾಮದ ಹೆಮ್ಮೆಯ ಶಾಲೆಯಲ್ಲಿ ಖಾಸಗಿ ಶಾಲೆಗೂ ಮಿಗಿಲಾದ ಶಿಕ್ಷಣ ನಡೆಯುತ್ತಿದೆ. ಮುಂದೆ ಜಿಲ್ಲೆಗೇ ಮಾದರಿ ಶಾಲೆ ಮಾಡುವುದೇ ನಮ್ಮ ಗುರಿ’ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜೆಸಿಬಿ ರಾಮು.

‘ಎಸ್‌ಡಿಎಂಸಿ ಮತ್ತು ಗ್ರಾಮಸ್ಥರು ನಮ್ಮ ಶಾಲೆ ಅಭಿವೃದ್ಧಿ ಹೊಂದಲು ಶ್ರಮಿಸುತ್ತಿದ್ದಾರೆ. ಆಟದ ಮೈದಾನ ಕೊರತೆ ನೀಗಿಸಲು ಆಸಕ್ತರಾಗಿದ್ದಾರೆ. ಜತೆಗೆ ಗುಣಾತ್ಮಕ ಶಿಕ್ಷಣ ನೀಡಲು ನಮ್ಮ ಶಾಲೆಯ ಶಿಕ್ಷಕರಾದ ಚಲುವರಾಜು,ಬಿ. ಕೆ, ಶಶಿಧರ ಬಿ. ಎನ್, ಪಂಕಜಾಕ್ಷಿ, ಭಾರತಿ ಕೆ ಇವರ ಸಹಕಾರವನ್ನು ಮರೆಯಲಾಗದು. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯನ್ನು ಮಾದರಿ ಮಾಡುತ್ತೇವೆ’ ಎಂದು ಮುಖ್ಯಶಿಕ್ಷಕ ಸಿ. ವಿ. ಭೀಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.