ADVERTISEMENT

ರಾಜೀನಾಮೆ ಅಂಗೀಕಾರ ಕಾನೂನು ಬಾಹಿರ

ನಗರಸಭೆಯ ಭ್ರಷ್ಟಾಚಾರ, ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ; ಸಿದ್ದರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:47 IST
Last Updated 12 ಮೇ 2017, 10:47 IST
ಮಂಡ್ಯ: ‘ನಗರಸಭೆಯ ಭ್ರಷ್ಟಾಚಾರ ಗಳಿಗೆ ಬೇಸತ್ತು ಸದಸ್ಯತ್ವಕ್ಕೆ ನಾನು ಸಲ್ಲಿಸಿದ್ದ ರಾಜೀನಾಮೆಯನ್ನು ರಾಜಕೀಯ ಒತ್ತಡಕ್ಕೆ ಮಣಿದು, ಕಾನೂನುಬಾಹಿರವಾಗಿ ಪ್ರಭಾರ ಜಿಲ್ಲಾಧಿಕಾರಿ ಅಂಗೀಕಾರ ಮಾಡಿದ್ದಾರೆ’ ಎಂದು ಮಾಜಿ ಸದಸ್ಯ ಬಿ.ಸಿದ್ದರಾಜು ಆರೋಪಿಸಿದರು.
 
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಗರಸಭೆ ಅಧ್ಯಕ್ಷನಾಗಿ 20 ತಿಂಗಳು ಯಶಸ್ವಿಯಾಗಿ ಆಡಳಿತ ನಡೆಸಿದ್ದೆ. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಾಸಕ ಅಂಬರೀಷ್‌ ಅವರ ರಾಜಕೀಯ ಕುತಂತ್ರಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು.
 
ನಂತರ ಬಂದ ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಅವರ ವಿರುದ್ಧ  ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಬೇಸತ್ತು, ನನ್ನ ದೂರುಗಳ ಕುರಿತು ಶೀಘ್ರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಏ. 1ರಂದು ರಾಜೀನಾಮೆ ಸಲ್ಲಿಸಿದ್ದೆ’ ಎಂದು ಹೇಳಿದರು.
 
‘ನಾನು ಸಲ್ಲಿಸಿದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವ ಬದಲು ಪ್ರಭಾರ ಜಿಲ್ಲಾಧಿಕಾರಿ ಬಿ.ಶರತ್‌ ಅವರು ಮೇ 5ರಂದು ರಾಜೀನಾಮೆ ಅಂಗೀಕರಿಸಿ ದ್ದಾರೆ. ರಜೆಯಲ್ಲಿದ್ದ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲ ಅವರು ಹಿಂದಿರುಗಿ ಬರುವ ಐದು ದಿನ ಮೊದಲು ತರಾತುರಿಯಲ್ಲಿ ರಾಜೀನಾಮೆ ಅಂಗೀಕರಿಸುವ ಅಗತ್ಯ ಏನಿತ್ತು? ಇದನ್ನು ಗಮನಿಸಿದರೆ ನನ್ನ ಹೋರಾಟ ದಮನ ಮಾಡುವ ಉದ್ದೇಶದಿಂದ ಷಡ್ಯಂತ್ರ ಹೆಣೆದಿರುವುದು ತಿಳಿಯುತ್ತದೆ.
 
ನನ್ನ ರಾಜಕೀಯ ವಿರೋಧಿಗಳು ಪ್ರಭಾರ ಜಿಲ್ಲಾಧಿಕಾರಿ ಮೇಲೆ ಒತ್ತಡ ತಂದು ರಾಜೀನಾಮೆ ಅಂಗೀಕರಿಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.
 
‘ಪ್ರಭಾರ ಜಿಲ್ಲಾಧಿಕಾರಿಗೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಜೀನಾಮೆಯನ್ನು ನನ್ನ ಕೈಬರಹದಲ್ಲಿ ಸಲ್ಲಿಸಿಲ್ಲ. ನಾನೇ ಖುದ್ದಾಗಿಯೂ ರಾಜೀನಾಮೆ ಸಲ್ಲಿಸಿಲ್ಲ. ಆದರೂ, ರಾಜೀನಾಮೆ ಅಂಗೀಕರಿ ಸಿರುವುದು ಕಾನೂನುಬಾಹಿರ’ ಎಂದು ಆರೋಪಿಸಿದರು.
 
‘ಅಜಯ್‌ ನಾಗಭೂಷಣ ಅವರು ಜಿಲ್ಲಾಧಿಕಾರಿ ಆಗಿದ್ದಾಗಲೂ ನಗರಸಭೆ ಅಕ್ರಮಗಳ ವಿರುದ್ಧ ಬೇಸತ್ತು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದೆ. ಆದರೆ,  ನಾಗಭೂಷಣ್‌, ನಾನು ನೀಡಿದ್ದ ದೂರುಗಳ ಬಗ್ಗೆ ಸಮಿತಿಯೊಂದನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು.
 
ಸದ್ಯ ಸಮಿತಿ ವರದಿ ನೀಡಿದ್ದು, ಪ್ರಭಾರ ಜಿಲ್ಲಾಧಿಕಾರಿ ವರದಿ ಅನ್ವಯ ಕ್ರಮ ಕೈಗೊಳ್ಳುವ ಬದಲು ನಾನು ಸಲ್ಲಿಸಿದ್ದ ರಾಜೀನಾಮೆ ಅಂಗೀಕರಿ ಸಿದ್ದಾರೆ. ಇದರಿಂದ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಿದೆ’ ಎಂದರು.
 
ಮಧ್ಯಂತರ ಆದೇಶ ಬರಲಿ:  ‘ನಗರಸಭೆ ಭ್ರಷ್ಟಾಚಾರಗಳ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯ ಹಾಗೂ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ನಾನು ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ಮೇಲೆ ಇನ್ನೆರಡು ದಿನಗಳಲ್ಲಿ ಮಧ್ಯಂತರ ಆದೇಶ ನೀಡಬೇಕು’ ಎಂದು ಸಿದ್ದರಾಜು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.