ADVERTISEMENT

ರಾಜ್ಯ ಬಜೆಟ್‌: ಕೊಡಗಿನ ಜನರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:21 IST
Last Updated 22 ಮಾರ್ಚ್ 2017, 10:21 IST

ಮಡಿಕೇರಿ:  ಪ್ರಸಕ್ತ ಸಾಲಿನ ಬಜೆಟ್‌ನ ಬಗ್ಗೆ ಕೊಡಗು ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿತು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಭರತ್ ಕುಮಾರ್ ದೂರಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಕೇವಲ ₹ 50 ಕೋಟಿ ಅನುದಾನವನ್ನು ನೀಡಿದ್ದಾರೆ. ಕೊಡಗಿನ ರಸ್ತೆಗಳ ಸ್ಥಿತಿ ಅರಿಯದೇ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಮೇಲಿದ್ದ ನಂಬಿಕೆ, ವಿಶ್ವಾಸ ಹುಸಿಯಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಹೆಚ್ಚಿನ ಆದಾಯ ರಾಜ್ಯ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಇದರ ಜತೆಗೆ ಇಲ್ಲಿನ ಕಾಫಿ, ಕರಿಮೆಣಸಿನ ಮೇಲಿನ ತೆರಿಗೆಯೂ ಸಾಕಷ್ಟು ಪ್ರಮಾಣದಲ್ಲಿ ರಾಜ್ಯ ಸರ್ಕಾರದ ಬೊಕ್ಕಸವನ್ನು ಸೇರುತ್ತಿದೆ. ಆದರೆ, ಸರ್ಕಾರ ಕಡೆಗಣಿಸಿದೆ ಎಂದು ದೂರಿದರು.

ಕಸ್ತೂರಿ ರಂಗನ್ ವರದಿಯು ಜಿಲ್ಲೆಗೆ ಮಾರಕವಾಗಿದೆ. ಈ ಬಗ್ಗೆ ಜನರ ಅಭಿಪ್ರಾಯಗಳನ್ನು ಲೆಕ್ಕಿಸದೇ ವರದಿಯನ್ನು ಅನುಷ್ಠಾನ ತರುವಲ್ಲಿ ಮುಂದಾಗಿದೆ; ಈ ಬಗ್ಗೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜನರ ಅಭಿಪ್ರಾಯ ಕೇಳಲು ಮುಂದಾಗಿಲ್ಲ ಎಂದು ತಿಳಿಸಿದರು.

ಮಡಿಕೇರಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮನೋಜ್ ಬೊಪ್ಪಣ್ಣ ಮಾತನಾಡಿ, ರೈತರ ಸಾಲ ಮನ್ನಾ, ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆಯನ್ನೂ ಸಿದ್ದರಾಮಯ್ಯ ಘೋಷಿಸದೇ ರೈತ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಮನ್ಸೂರ್ ಆಲಿ, ಎಚ್.ಎಸ್. ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.