ADVERTISEMENT

ರಿಯಾಯಿತಿ ದರದಲ್ಲಿ ವಿಮೆ ಸೌಲಭ್ಯ

ವಿವಿಧ ಸವಲತ್ತುಗಳ ಘೋಷಣೆ ಮಾಡಿದ ಮನ್‌ಮುಲ್‌ ಅಧ್ಯಕ್ಷ ರಾಮಕೃಷ್ಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:18 IST
Last Updated 22 ಮಾರ್ಚ್ 2017, 10:18 IST

ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹೈನು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಜಾನುವಾರು ವಿಮೆ ಹಾಗೂ ಹಲವು ಸಲವತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.

ಸಮೀಪದ ಗೆಜ್ಜಲಗೆರೆ ಮನ್‌ಮುಲ್‌ ಡೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಕಸ್ಮಿಕ ಅಥವಾ ಸಹಜ ಮರಣದಿಂದಾಗುವ ಆರ್ಥಿಕ ನಷ್ಟ ತಪ್ಪಿಸಲು ಒಕ್ಕೂಟದ  ವ್ಯಾಪ್ತಿಯಲ್ಲಿ ವಿಮೆ ಮಾಡಿಸುವ ರಾಸುಗಳಿಗೆ  ಶೇ 70ರ ರಿಯಾಯಿತಿ ದರದಲ್ಲಿ  ಅಂದಾಜು 30,000 ಹಾಲು ಉತ್ಪಾದಕರ ರಾಸುಗಳಿಗೆ ₹ 1.68 ಕೋಟಿ  ಪ್ರೀಮಿಯಮ್ ಮೊತ್ತವನ್ನು ಒಕ್ಕೂಟ ಭರಿಸುತ್ತಿದೆ ಎಂದರು.

ಜಾನುವಾರುಗಳಿಗೆ ಮೇವಿನ ಕೊರತೆ ಉದ್ಭವಿಸಿದ್ದು, ಒಕ್ಕೂಟದ ವತಿಯಿಂದ  ಮೇವಿನ ಜೋಳ ವಿತರಣೆ ಮಾಡಲು ಯೋಜಿಸಲಾಗಿದೆ.  1,800 ಕ್ವಿಂಟಲ್‌ ಬಹು ಕಟಾವಿನ ಮೇವಿನ ಜೋಳ, 600 ಕ್ವಿಂಟಲ್ ಆಫ್ರಿಕನ್ ಟಾಲ್ ಮುಸುಕಿನ ಜೋಳವನ್ನು ಹಾಲು ಉತ್ಪಾದಕರಿಗೆ ಶೇ 50ರ ರಿಯಾಯಿತಿ ದರದಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಪಶು ಅಹಾರ ಖರೀದಿಸಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ 2016ರ ನವೆಂಬರ್ ತಿಂಗಳಿನಿಂದ 3 ಬಾರಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಇದಲ್ಲದೇ ಒಕ್ಕೂಟದ ವತಿಯಿಂದ ₹ 26 ಲಕ್ಷ ಮೌಲ್ಯದ ನೇಪಿಯಾರ್ ಮೇವಿನ ಬಿತ್ತನೆ ಕಾಂಡವನ್ನು ವಿತರಿಸಲಾಗಿದೆ.

ಸುಮಾರು 70 ಸಾವಿರ ಮೇವಿನ ಮರಗಳು ಮತ್ತು ಸಸಿಗಳನ್ನು ಸಂಘಗಳ ಮುಖಾಂತರ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.  ಬರ ಪರಿಸ್ಥಿತಿ ಇದ್ದರೂ ಪ್ರತಿ ತಿಂಗಳು ಉತ್ಪಾದಕರ ಕೋರಿಕೆಗೆ ಅನುಗುಣವಾಗಿ ₹ 4,325 ಟನ್‌ಗಳಷ್ಟು ಪಶು ಆಹಾರ ವಿತರಿಸುತ್ತಿದ್ದೇವೆ ಎಂದರು.

ಗೋಷ್ಠಿಯಲ್ಲಿ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಗುರುಲಿಂಗಯ್ಯ, ಉಪವ್ಯವಸ್ಥಾಪಕರಾದ ಡಾ.ವೆಂಕಟೇಶ್, ಶ್ರೀನಿವಾಸ್ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT