ADVERTISEMENT

ವಸತಿ ಶಾಲೆಗೆ ಸರ್ಕಾರಿ ಜಾಗ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:12 IST
Last Updated 28 ಮೇ 2017, 6:12 IST

ಶ್ರೀರಂಗಪಟ್ಟಣ: ಮುಸ್ಲಿಂ ಬಾಲಕಿಯರ ವಸತಿ ಶಾಲೆಗೆ ತಾಲ್ಲೂಕಿನ ಗಡಿ ಭಾಗದ ಮೊಗರಹಳ್ಳಿ ಬಳಿ ಇರುವ ಸರ್ಕಾರಿ ಭೂಮಿ ಮಂಜೂರು ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಇದನ್ನು ವಿರೋಧಿಸಿ ವಿವಿಧ ಗ್ರಾಮಗಳ ಜನರು ತಾಲ್ಲೂಕು ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಸುಮಾರು ಅರ್ಧ ತಾಸು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಮೊಗರಹಳ್ಳಿ ಬಳಿ ಸರ್ವೆ ನಂ. 24ರಲ್ಲಿ 10 ಎಕರೆ ಸರ್ಕಾರಿ ಜಾಗ ಇದ್ದು, ಮಸ್ಲಿಂ ಬಾಲಕಿಯರ ವಸತಿ ಶಾಲೆಗೆ ಮಂಜೂರು ಮಾಡುವ ಯತ್ನ ನಡೆದಿದೆ. ಮೈಸೂರು ನಗರಕ್ಕೆ ಹತ್ತಿರ ಇರುವ ಈ ಬೆಲೆ ಬಾಳುವ ಜಾಗವನ್ನು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಮುಸ್ಲಿಂ ವಸತಿ ಶಾಲೆಗೆ ಮಂಜೂರು ಮಾಡಿಸಲು ಮುಂದಾಗಿದ್ದಾರೆ.

ಈ ಸಂಬಂಧ ಜಮೀನು ಅಳತೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಜನವಸತಿ ಸ್ಥಳಕ್ಕೆ ಹತ್ತಿರ ಇರುವ ಸದರಿ ಸರ್ಕಾರಿ ಜಮೀನನ್ನು ವಸತಿ ಶಾಲೆಗೆ ಕೊಡಬಾರದು ಎಂದು ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಂ, ಮಾಜಿ ಅಧ್ಯಕ್ಷ ವಾಸು, ಪೈ.ಮಹದೇವು, ರೈತ ಸಂಘದ ಸ್ವಾಮಿ ಇತರರು ಆಗ್ರಹಿಸಿದರು.

ADVERTISEMENT

ಈ ಜಾಗದಲ್ಲಿ ನಿವೇಶನ ಕೋರಿ ಮೊಗರಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಸ್ಥರು ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾ ರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಜಿಲ್ಲಾಧಿಕಾರಿ ಜಿಯಾವುಲ್ಲಾ ಮುಸ್ಲಿಂ ಬಾಲಕಿಯರ ವಸತಿ ಶಾಲೆಗೆ ಈ ಜಾಗ ನೀಡಲು ಹೆಚ್ಚಿನ ಮುತುವರ್ಜಿ ವಹಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದರು.

ಬೊಮ್ಮೂರು ಅಗ್ರಹಾರ ಬಳಿ ಜನ ವಸತಿ ಸ್ಥಳದಲ್ಲಿ ಖಬರಸ್ತಾನ್‌ಗೆ ಜಾಗ ಮಂಜೂರು ಮಾಡಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಟೌನ್‌ ವ್ಯಾಪ್ತಿಯ ಗಂಜಾಂನಲ್ಲಿ ಒಂದು ಬಡಾವಣೆಯನ್ನೇ ಮುಸ್ಲಿಂ ಜನರಿಗೆ ಮೀಸಲಿಟ್ಟಿರುವುದು ಸ್ಥಳೀಯರ ಅಸಹನೆಗೆ ಕಾರಣವಾಗಿದೆ. ಹೀಗೆ ತುಷ್ಠೀಕರಣ ನೀತಿ ಅನುಸರಿಸು ವುದನ್ನು ಬಿಡಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲ ವರ್ಗದ ಜನರನ್ನು ಸಮನಾಗಿ ಕಾಣಬೇಕು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಟಿ.ಶ್ರೀಧರ್‌ ಆಗ್ರಹಿಸಿದರು.

ಮೊಗರಹಳ್ಳಿ ಬಳಿಯ ಸರ್ಕಾರಿ ಜಮೀನನ್ನು ಮುಸ್ಲಿಂ ಬಾಲಕಿಯರ ವಸತಿ ಶಾಲೆಗೆ ಮಂಜೂರು ಮಾಡುವ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾ ಕೇಂದ್ರಕ್ಕೆ ತೆರಳಿ ಜಿಲ್ಲಾಧಿಕಾರಿ ಹಠಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಕೀಲ ಜಿ.ಎನ್‌.ರವೀಶ್‌ ಎಚ್ಚರಿಸಿದರು.

ಗ್ರಾ.ಪಂ ಸದಸ್ಯರಾದ ಡಾನ್‌ ಹೆನ್ರಿ, ನಂದೀಶ್‌, ಪುರಸಭೆ ಸದಸ್ಯ ಜಿ.ಉಮಾ ಶಂಕರ್‌, ಹಿಂದೂ ಜಾಗರಣ ವೇದಿಕೆ ಮುಖಂಡ ಬಸವರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಪುಟ್ಟರಾಮು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್‌ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.