ADVERTISEMENT

ಸಾರ್ವಜನಿಕ ಸೇವೆಗೆ ಸಜ್ಜುಗೊಂಡ ಹೊಸ ಕಟ್ಟಡ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:33 IST
Last Updated 18 ನವೆಂಬರ್ 2017, 5:33 IST
ಮದ್ದೂರಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡ
ಮದ್ದೂರಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡ   

ಮದ್ದೂರು: ಪಟ್ಟಣದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ.

1948ರಲ್ಲಿ ಪಟ್ಟಣದ ಮಹಾದಾನಿ ಕೆ.ಗುರುಶಾಂತಪ್ಪ ಅವರು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಮ್ಮ 4.2ಎಕರೆ ಜಮೀನನ್ನು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ದಾನವಾಗಿ ನೀಡಿದರು. ಅಲ್ಲದೇ ಸ್ವಂತ ಹಣದಿಂದ ಆಸ್ಪತ್ರೆ ಕಟ್ಟಡ ಆರಂಭಿಸಿದರು.

ಸೆ. 25, 1948ರಲ್ಲಿ ಅಂದಿನ ಮೈಸೂರು ಅರಸ ಜಯಚಾಮರಾಜ ಒಡೆಯರ್‌ ಅವರು ಆಸ್ಪತ್ರೆಗೆ ಶಿಲಾನ್ಯಾಸ ಮಾಡಿದ್ದರು. ಬಳಿಕ ಏ. 14, 1956ರಲ್ಲಿ ಪೂರ್ಣಗೊಂಡ ಆಸ್ಪತ್ರೆ ಕಟ್ಟಡವನ್ನು ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಿದ್ದರು.

ADVERTISEMENT

ಈ ಆಸ್ಪತ್ರೆ ಕಟ್ಟಡ ಶಿಥಿಲಗೊಂಡ ಕಾರಣ ಶಾಸಕ ಡಿ.ಸಿ.ತಮ್ಮಣ್ಣ ಅವರ ಒತ್ತಾಸೆಯ ಫಲವಾಗಿ ಕಳೆದ ವರ್ಷ ಸರ್ಕಾರ ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ₹ 4.9 ಕೋಟಿ ಬಿಡುಗಡೆಗೊಳಿಸಿತು. ಅದರಂತೆ ಒಂದು ವರ್ಷದ ಅವಧಿಯೊಳಗೆ ಎರಡು ಅಂತಸ್ತುಗಳ ಸುಸಜ್ಜಿತ ಕಟ್ಟಡ ತಲೆ ಎತ್ತಿದೆ. ಸುಣ್ಣಬಣ್ಣದೊಂದಿಗೆ ಕಂಗೊಳಿಸುತ್ತಿರುವ ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದಷ್ಟೆ ಬಾಕಿ ಉಳಿದಿದೆ.

‘ಈ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಹೊರ ರೋಗಿಗಳ ವಿಭಾಗ, ಪ್ರಯೋಗಾಲಯ ಸೇರಿದಂತೆ ಆಡಳಿತ ಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಉಳಿದಂತೆ ಹಳೇ ಕಟ್ಟಡವನ್ನು ಒಳ ರೋಗಿಗಳ ಚಿಕಿತ್ಸೆಗೆ ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಆರ್‌.ಶಶಿಕಲಾ ತಿಳಿಸಿದರು.

ಸಮಸ್ಯೆಗಳ ಸಾಲು ಸಾಲು: ಈ ಆಸ್ಪತ್ರೆಗೆ ಹೊಸ ಕಟ್ಟಡ ಬಂದರೂ ಸಮಸ್ಯೆಗಳಿಂದ ಇಂದಿಗೂ ಮುಕ್ತವಾಗಿಲ್ಲ. ಆತ್ಯಾಧುನಿಕ ಉಪಕರಣಗಳಿದ್ದರೂ, ವೈದ್ಯ ತಜ್ಞರ ಕೊರತೆಯಿಂದಾಗಿ ಆಸ್ಪತ್ರೆ ಬಸವಳಿದಿದೆ.

ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಇರುವ ಅಸ್ಪತ್ರೆಗೆ ನಿತ್ಯ ಗ್ರಾಮಾಂತರ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಜಿಲ್ಲಾಸ್ಪತ್ರೆ ಇಲ್ಲವೇ ಖಾಸಗಿ ಆಸ್ಪತ್ರೆಗೆ ಮೊರೆಹೋಗಬೇಕಾದ ಅನಿವಾರ್ಯತೆ ಒದಗಿದೆ.

ಸಿಬ್ಬಂದಿ ಕೊರತೆ: ಈ ಆಸ್ಪತ್ರೆಗೆ ಒಟ್ಟು 108 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 54 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 54 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಪ್ರಮುಖವಾಗಿ ಫಿಜಿಷಿಯನ್, ಜತೆಗೆ 4 ವೈದ್ಯಾಧಿಕಾರಿಗಳ ಕೊರತೆಯಿದೆ.

39 ‘ಡಿ’ ದರ್ಜೆ ನೌಕರರ ಹುದ್ದೆಗಳು ಮಂಜೂರಾಗಿವೆ. ಆದರೆ 33 ಹುದ್ದೆಗಳು ಖಾಲಿಯಿದ್ದು, ಕೇವಲ 6 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಹೊರ ಗುತ್ತಿಗೆಯಿಂದ ತಾತ್ಕಾಲಿಕವಾಗಿ 15 ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿಯನ್ನು ತುಂಬಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಆಸ್ಪತ್ರೆಯಲ್ಲಿರುವ 3 ಆಂಬುಲೆನ್ಸ್‌ನಲ್ಲಿ ಒಂದು ಆಂಬುಲೆನ್ಸ್ ಕೆಟ್ಟು ಮೂರು ತಿಂಗಳು ಕಳೆದಿದೆ. ಇಂದಿಗೂ ದುರಸ್ತಿಯಾಗಿಲ್ಲ. ನಗು-ಮಗು ಆಂಬುಲೆನ್ಸ್‌ನಲ್ಲಿ ಕೇವಲ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಮಾತ್ರ ಸಾಗಿಸಬೇಕು. ಆದರೆ ಆಂಬುಲೆನ್ಸ್ ಸಮಸ್ಯೆಯಿಂದಾಗಿ ಇದರಲ್ಲಿಯೇ ಸಾಗಿಸಬೇಕಾದ ಪರಿಸ್ಥಿತಿ ಒದಗಿದೆ.

ಆಸ್ಪತ್ರೆಯಲ್ಲಿ ಅಳವಡಿಸಿರುವ ಜನರೇಟರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್‌ ವ್ಯತ್ಯಯಗೊಂಡಾಗ ಇಲ್ಲಿನ ರೋಗಿಗಳು ಕತ್ತಲಲ್ಲಿ ರಾತ್ರಿ ದೂಡಬೇಕಾದ ಪರಿಸ್ಥಿತಿ ಒದಗಿದೆ.

ರಾತ್ರಿಯ ವೇಳೆಯಲ್ಲಿ ಕಾವಲುಗಾರ ಇಲ್ಲದ ಕಾರಣ ರೋಗಿಗಳಿಗೆ ಹಾಗೂ ವೈದ್ಯರಿಗೆ ಭದ್ರತೆ ಇಲ್ಲದಂತಾಗಿದೆ. ರಾತ್ರಿ ಪಾಳಿ ಕೆಲಸ ಮಾಡುವ ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆಯು ಈಚೆಗೆ ನಡೆದಿದೆ.

ರಾತ್ರಿಯ ವೇಳೆ ಒಬ್ಬರೆ ಒಬ್ಬರು ಕರ್ತವ್ಯ ನಿರತ ವೈದ್ಯರಿದ್ದು, ಬೆಂಗಳೂರು– ಮೈಸೂರು ಹೆದ್ದಾರಿಯಾದ್ದರಿಂದ, ರಸ್ತೆ ಅಪಘಾತಗಳು ನಡೆದಾಗ ಹೆಚ್ಚಿನ ವೈದ್ಯರು ಇಲ್ಲದೆ ತೊಂದರೆಯಾಗುತ್ತಿದೆ. ಈ ಹಿಂದೆ ಮಂಜೂರಾದ ತುರ್ತು ಅಪಘಾತ ಚಿಕಿತ್ಸಾ ಘಟಕವೂ ವೈದ್ಯರಿಲ್ಲದ ಕಾರಣ ಮುಚ್ಚಿದೆ.

ಕೂಡಲೇ ಇಲ್ಲಿನ ವೈದ್ಯ ಸಿಬ್ಬಂದಿ ಕೊರತೆ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಅಲ್ಲದೇ ಆಸ್ಪತ್ರೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿ ಮೂಲಸೌಲಭ್ಯಗಳನ್ನು ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

* * 

ವೈದ್ಯ ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಉದ್ಭವಿಸಿದೆ. ಮಂಡ್ಯ ಮಿಮ್ಸ್‌ನಿಂದ ತರಬೇತಿ ನಿರತ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಿದರೆ ಒಂದಿಷ್ಟು ಸಮಸ್ಯೆ ನಿವಾರಣೆಯಾಗಲಿದೆ
ಡಾ.ಆರ್‌.ಶಶಿಕಲಾ,
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.