ADVERTISEMENT

ಸುದ್ದಿ ಅಪಪ್ರಚಾರವಾಗದಿರಲಿ; ಕೋಡಿಮಠ ಶ್ರೀ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:04 IST
Last Updated 29 ನವೆಂಬರ್ 2017, 5:04 IST

ಕೆ.ಆರ್.ಪೇಟೆ: ‘ಸುದ್ದಿಯು ಪ್ರಚಾರವಾಗುವ ಬದಲು ಅಪಪ್ರಚಾರವಾಗದಂತೆ ಮುದ್ರಣ ಮತ್ತು ದೃಶ್ಯ ಮಾದ್ಯಮದವರು ಎಚ್ಚರಿಕೆ ವಹಿಸುವ ಅಗತ್ಯವಿದೆ’ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ರಾಮದಾಸ್ ಲಂಚ್ ಹೋಮ್ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರೆಸ್ ಕ್ಲಬ್ ಆಫ್ ಕೃಷ್ಣರಾಜಪೇಟೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ವಿಚಾರವನ್ನು ಪ್ರಚಾರ ಮಾಡಿ ಅದು ಸಮಾಚಾರವಾಗುವಂತೆ ಮಾಡಬೇಕಾದ ಧರ್ಮ ಪತ್ರಿಕೆಗಳದ್ದು. ಆದರೆ, ಪ್ರಚಾರವೇ ಅಪಪ್ರಚಾರವಾಗಿಬಿಟ್ಟರೆ ಸಮಾಜದ ಸ್ವಾಸ್ಥ್ಯ ಹಾಳಾಗಿ ಬಿಡುತ್ತದೆ ಎಂದರು.

ADVERTISEMENT

ನಿದರ್ಶನವೊಂದನ್ನು ಉದಾಹರಿಸಿದ ಸ್ವಾಮೀಜಿ, ‘ಪಾದ್ರಿಯೊಬ್ಬರು ಒಂದು ಪಟ್ಟಣದಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದರು. ಅವರು ಅಲ್ಲಿನ ಕಾರ್ಯಕರ್ತರೊಂದಿಗೆ ಮಾತನಾಡುತ್ತ, ಈ ಊರಿನ ವೇಶ್ಯೆಯರ ಸ್ಥಿತಿಗತಿ ಹೇಗಿದೆ ? ಹೇಗೆ ಜೀವನ ನಡೆಸುತ್ತಿದ್ದಾರೆ ? ಎಂದು ಪ್ರಶ್ನಿಸಿ ಉತ್ತರ ಪಡೆದುಕೊಂಡರು. ಅಲ್ಲೇ ಇದ್ದ ಮಾಧ್ಯಮದವರು ಅದನ್ನು ವರದಿ ಮಾಡುವಾಗ ‘ವೇಶ್ಯೆಯರು ಎಲ್ಲಿದ್ದಾರೆ’? ಎಂದು ಪ್ರಶ್ನಿಸಿದ ಪಾದ್ರಿ ಎಂಬ ದಪ್ಪ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದರು. ಇದು ಈಗ ಆಗುತ್ತಿರುವ ದೊಡ್ಡ ಪ್ರಮಾದ. ಸುದ್ದಿಯನ್ನು ವರದಿ ಮಾಡುವಾಗ ಸುದ್ದಿಯ ಮೂಲವನ್ನು ಬರೆಯದಿದ್ದರೆ ಸಂಬಂಧಿಸಿದ ವ್ಯಕ್ತಿ ನೇಣು ಹಾಕಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

‘ಧರ್ಮದೊಳಕ್ಕೆ ರಾಜಕೀಯ ಬೆರೆಸಿದ್ದರಿಂದ ರಾಜ್ಯದಲ್ಲಿ ಲಿಂಗಾಯತ ವೀರಶೈವ ಸ್ವಾಮೀಜಿಗಳ ನಡುವೆ ಕಂದಕ ಉಂಟಾಗಿದೆ’ ಎಂದು ಮಾಜಿ ಸ್ಪೀಕರ್ ಕೃಷ್ಣ ಅವರ ಪ್ರಶ್ನೆಗೆ ಅವರು ಸಮಜಾಯಿಷಿ ನೀಡಿದರು.

ಕೃಷ್ಣ ಅವರು, ‘ಇಂದು ಬದ್ಧತೆ ಎಂಬುದು ಕೇವಲ ಅಲಂಕಾರಿಕ ಪದವಾಗಿದೆ. ಪ್ರಜಾಪ್ರಭುತ್ವ ಉಳಿದಿರುವುದೇ ಪತ್ರಿಕೆಗಳು ಮತ್ತು ನ್ಯಾಯಾಂಗದಿಂದ, ಇವುಗಳಲ್ಲೂ ಬದ್ಧತೆಯ ಕೊರತೆ ಉಂಟಾದರೆ ಪ್ರಜಾಪ್ರಭುತ್ವ ನಾಶವಾಗುವದು ನಿಶ್ಚಿತ ಎಂದರು.

ಪ್ರೆಸ್ ಕ್ಲಬ್ ಘಟಕವನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಸಕ ನಾರಾಯಣಗೌಡ ವಹಿಸಿದ್ದರು. ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಮಹೇಶ್ ಚಂದ್ರಗುರು ವಿಶೇಷ ಉಪನ್ಯಾಸ ನೀಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ಚಂದ್ರು, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ಸ್ವಾಮಿನಾಯಕ, ಉಪಾಧ್ಯಕ್ಷ ಜಾನಕೀರಾಮು, ರಾಜ್ಯ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಅಧ್ಯಕ್ಷ ಎಂ.ಡಿ.ಕೃಷ್ಣ ಮೂರ್ತಿ ಇದ್ದರು.

ಜೆಡಿಎಸ್ ನಿರ್ಣಾಯಕ ಪಾತ್ರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯಾಡಳಿತದಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೋಡಿ ಮಠದ ಶ್ರೀ ಭವಿಷ್ಯ ನುಡಿದರು. ಪತ್ರಕರ್ತರೊಂದಿಗೆ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಜನರಿಂದ ಉತ್ತಮ ಬೆಂಬಲ ಪಡೆಯಲಿದೆ ಎಂದರು.

ಗವಿಮಠ ಕೋಡಿ ಮಠಕ್ಕೆ ಸೇರಿದೆ
‘ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠವು ನಮ್ಮ ಮಠದ ಶಾಖಾ ಮಠವಾಗಿದೆ. ಮಠದ ಆಡಳಿತದ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ ಸಲ್ಲಿಸಲಾಗಿತ್ತು. ಗವಿಮಠವು ಕೋಡಿಮಠದ ಆಡಳಿತಕ್ಕೆ ಸೇರಿದ್ದೆಂದು ನ್ಯಾಯಾಲಯ ತೀರ್ಪು ನೀಡಿದೆ. ಇನ್ನು ಮುಂದೆ ವಾರಕ್ಕೊಮ್ಮೆ ಗವಿಮಠಕ್ಕೆ ಭೇಟಿ ನೀಡಿ ಮಠದ ಸಮಗ್ರ ಅಭಿವೃದ್ಧಿಯ ಬಗ್ಗೆ ನಿಗಾ ವಹಿಸುತ್ತೇನೆ’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.