ADVERTISEMENT

ಸೇವೆಗಿಂತ ದೊಡ್ಡ ಪ್ರಶಸ್ತಿ ಇಲ್ಲ:ಜಿ.ಮಾದೇಗೌಡ

ಮದ್ದೂರಿನಲ್ಲಿ ಬಿಜಿಎಸ್‌ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 10:20 IST
Last Updated 23 ಜನವರಿ 2017, 10:20 IST

ಮದ್ದೂರು: ನಿಸ್ವಾರ್ಥ ಸೇವೆಗಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ ಎಂದು ಹೋರಾಟ ಗಾರ ಜಿ.ಮಾದೇಗೌಡ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 73ನೇ ಜಯಂತಿ ಸಮಾರಂಭದಲ್ಲಿ  ಚುಂಚಶ್ರೀ ಗೆಳೆಯರ ಬಳಗದ ವತಿಯಿಂದ ‘ಬಿಜಿಎಸ್ ಶಿಕ್ಷಣ ಸೇವಾ ರತ್ನ ಪ್ರಶಸ್ತಿ’  ಸ್ವೀಕರಿಸಿ ಅವರು ಮಾತನಾಡಿದರು.

‘ನನ್ನ ಸಾಧನೆ ಚಿಕ್ಕದು. ಆದರೆ, ನಿಮ್ಮ ಪ್ರೀತಿ ದೊಡ್ಡದು. ನಿಮ್ಮೆಲ್ಲರ ಪ್ರೀತಿ, ಒತ್ತಾಸೆ, ಸಹಕಾರದಿಂದ ಈ  ಸಾಧನೆ ಸಾಧ್ಯವಾಗಿದೆ. ನಿಮ್ಮ ಅಭಿಮಾನಕ್ಕೆ ಸದಾ ಋಣಿ’ ಎಂದು ಭಾವುಕರಾಗಿ ನುಡಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕೆ.ಎಂ.ದೊಡ್ಡಿಯಂತಹ ಕುಗ್ರಾಮದಲ್ಲಿ ಅಂದು ಕೇವಲ 20 ಮಕ್ಕಳಿಂದ ಆರಂಭಗೊಂಡ ಭಾರತೀ ವಿದ್ಯಾ ಸಂಸ್ಥೆ ಇದೀಗ ಎಲ್‌ಕೆಜಿಯಿಂದ ಎಂಜಿನಿಯ ರಿಂಗ್‌ ಶಿಕ್ಷಣದವರೆಗೆ ಬೆಳೆದಿದೆ. ಸಾವಿರಾರು ಗ್ರಾಮೀಣ ಮಕ್ಕಳ ಪಾಲಿಗೆ ಜ್ಞಾನ ದೇಗುಲವಾಗಿ ಅವರ ಬಾಳನ್ನು ಬೆಳಗಿದೆ. ಈ ಸಂಸ್ಥೆಯನ್ನು ಕಟ್ಟಲು ಜಿ.ಮಾದೇಗೌಡರ ಶ್ರಮ ಹೋರಾಟ ಅನನ್ಯ. ಅವರನ್ನು ತಡವಾಗಿಯಾದರೂ ಗುರುತಿಸಿ ಪ್ರಶಸ್ತಿ ಪ್ರದಾನಿಸುತ್ತಿರುವುದು ಪ್ರಶಸ್ತಿಗೆ ಮೌಲ್ಯ ಹೆಚ್ಚುವಂತಾಗಿದೆ ಎಂದರು.

ಪ್ರಾಧ್ಯಾಪಕ ಡಾ.ಎಚ್.ಎಸ್. ಮುದ್ದೇಗೌಡ ಅಭಿನಂದನಾ ಭಾಷಣ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿನಿ ಶ್ರಾವ್ಯಶ್ರೀ ಅವರನ್ನು ಅಭಿನಂದಿಸಲಾಯಿತು. ಸೆನೆಟ್ ಮಾಜಿ ಸದಸ್ಯ ವಿ.ಕೆ.ಜಗದೀಶ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಕೊಪ್ಪ ಜೋಗಿಗೌಡ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ರವಿಕುಮಾರ್, ಚುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಲಕ್ಷ್ಮಮ್ಮ ಶಿವರಾಮು, ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಭಾವಿಪ ಅಧ್ಯಕ್ಷ ಗುರುಸ್ವಾಮಿ, ಡಾ.ಬಿ.ಕೃಷ್ಣ, ಎಂ.ಎಸ್‌. ಶಿವರಾಮು  ಇದ್ದರು.

***
ಡಾ.ಜಿ.ಮಾದೇಗೌಡರ ನಿಷ್ಟುರ ಮನೋಭಾವ, ಪ್ರಾಮಾಣಿಕತೆಯ ಫಲವಾಗಿ ಭಾರತೀ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ
ಡಾ.ಎಚ್‌.ಎಸ್‌.ಮುದ್ದೇಗೌಡ
ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.