ADVERTISEMENT

ಹಕ್ಕಿಪಿಕ್ಕಿ ಜನರಿಗೆ ನಿವೇಶನ: ಗ್ರಾಮಸ್ಥರ ವಿರೋಧ

ಸ್ಥಳದಲ್ಲೇ ಮೊಕ್ಕಾಂ ಹೂಡಿದ ಗ್ರಾಮಸ್ಥರು: ಪೊಲೀಸ್‌ ಭದ್ರತೆಯಲ್ಲಿ ನೆಲ ಮಟ್ಟಸಗೊಳಿಸುವ ಕಾರ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 8:29 IST
Last Updated 13 ಜನವರಿ 2017, 8:29 IST
ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನಹಳ್ಳಿಯಲ್ಲಿರುವ ಸರ್ಕಾರಿ ಭೂಮಿಯಲ್ಲಿ, ಈ ಹಿಂದೆ ಮೊಗರಹಳ್ಳಿ ಬಳಿ ಬೀಡುಬಿಟ್ಟಿದ್ದ ಹಕ್ಕಿಪಿಕ್ಕಿ ಜನರಿಗೆ ನಿವೇಶನ ನೀಡಲು ತಾಲ್ಲೂಕು ಆಡಳಿತ ಯತ್ನ ಆರಂಭಿಸಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
 
ಚನ್ನಹಳ್ಳಿ ಗ್ರಾಮದ ಸ.ನಂ. 342ರಲ್ಲಿರುವ ಸರ್ಕಾರಿ ಜಮೀನಿನಲ್ಲಿ ಹಕ್ಕಿಪಿಕ್ಕಿ ಜನರಿಗೆ ನಿವೇಶನ ನೀಡಿ ಗುಡಿಸಲು ಹಾಕಿಕೊಡಲು ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದೆ. 
 
ತಹಶೀಲ್ದಾರ್‌ ಕೆ. ಕೃಷ್ಣ ಗುರುವಾರ ಸ್ಥಳಕ್ಕೆ ತೆರಳಿ ಜಿಲ್ಲಾಡಳಿತ ಗುರುತಿಸಿರುವ ಜಾಗವನ್ನು ಪೊಲೀಸ್‌ ಭದ್ರತೆಯಲ್ಲಿ ಮಟ್ಟಸ ಗೊಳಿಸಿದರು. 
 
ಜಾಗವನ್ನು ಮಟ್ಟಸಗೊಳಿಸುವಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅದನ್ನು ತಡೆದರು. 
 
‘ಚನ್ನಹಳ್ಳಿ ಗ್ರಾಮದ ರೈತರು ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನನನ್ನು ತಾಲ್ಲೂಕು ಆಡಳಿತ ದಿಢೀರ್‌ ವಶಕ್ಕೆ ಪಡೆದು ಎಲ್ಲಿಂದಲೋ ಬಂದ ಹಕ್ಕಿಪಿಕ್ಕಿ ಜನರಿಗೆ ನೀಡಲು ಮುಂದಾಗಿದೆ. ಹತ್ತಾರು ಮಂದಿ ರೈತರು ಈ ಜಮೀನು ಮಂಜೂರು ಮಾಡಿಕೊಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಅನುಭವದಲ್ಲಿ ಇರುವವರಿಗೆ ಜಮೀನು ಸಾಗುವಳಿ ಪತ್ರ ನೀಡುವ ಬದಲು ಹೊರ ಜಿಲ್ಲೆಯ ಜನರಿಗೆ ಜಮೀನು ಕೊಡುವ ಪ್ರಯತ್ನ ನಡೆಯುತ್ತಿದೆ. ಕ್ಷೇತ್ರದ ಶಾಸಕ ಕೂಡ ಹೊರಗಿನ ಜನರಿಗೆ ಈ ಜಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಶಾಸಕರ ಮಾತನ್ನೂ ಲೆಕ್ಕಿಸದೆ ಜಮೀನು ಕಸಿದುಕೊಳ್ಳುತ್ತಿದೆ’ ಎಂದು ಗ್ರಾಮದ ನಿಂಗೇಗೌಡ, ಕುಮಾರ್‌ ಇತರರು ಹೇಳಿದರು.
 
ಮಹದೇವಪುರ ಮತ್ತು ಚನ್ನಹಳ್ಳಿ ಗ್ರಾಮಗಳ ರೈತರ ನಡುವೆ ಉಂಟಾದ ವಿವಾದದ ಕಾರಣ ಸದರಿ ಜಮೀನಿಗೆ ಸಾಗುವಳಿ ಪತ್ರ ಪಡೆಯುವಲ್ಲಿ ವಿಳಂಬವಾಗಿದೆ. ಇದನ್ನೇ ಬಳಸಿಕೊಂಡು ತಾಲ್ಲೂಕು ಆಡಳಿತ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ನಾವು ಉಳುಮೆ ಮಾಡುತ್ತಿರುವ ಜಾಗವನ್ನು ಬಿಟ್ಟುಕೊಡುವುದಿಲ್ಲ. ಚನ್ನಹಳ್ಳಿ ಸಮೀಪವೇ ಬೇರೆ ಸರ್ಕಾರಿ ಭೂಮಿ ಇದ್ದು, ಹಕ್ಕಿಪಿಕ್ಕಿ ಜನರಿಗೆ ಅಲ್ಲಿ ಮನೆ ನಿರ್ಮಿಸಿಕೊಡಲಿ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನಮ್ಮ ಹೇಳಿದರು.
 
ಇದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್‌ ಕೆ. ಕೃಷ್ಣ, ‘ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಅವರು ಸ್ಥಳ ಪರಿಶೀಲನೆ ನಡೆಸಿ ಹಕ್ಕಿಪಿಕ್ಕಿ ಜನರಿಗೆ ನಿವೇಶನ ಹಂಚಲು ಚನ್ನಹಳ್ಳಿ ಗ್ರಾಮದ ಬಳಿ ಸ್ಥಳ ಗುರುತಿಸಿದ್ದಾರೆ. ರೈತರು ಉಳುಮೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರೂ ಅವರಿಗೆ ಸರ್ಕಾರದಿಂದ ಯಾವುದೇ ಸಾಗುವಳಿ ಚೀಟಿ ನೀಡಿಲ್ಲ. ಹಾಗಾಗಿ ಸರ್ಕಾರಿ ಜಾಗದಲ್ಲಿ ಹಕ್ಕಿಪಿಕ್ಕಿ ಜನರಿಗೆ ನಿವೇಶನ ಹಂಚಲಾಗುವುದು. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯರ ಮನವೊಲಿಸಲಾಗುವುದು’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.