ADVERTISEMENT

ಹೈಕಮಾಂಡ್‌ ಕೃಷ್ಣ ಮನವೊಲಿಸಲಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:16 IST
Last Updated 31 ಜನವರಿ 2017, 7:16 IST
ಹೈಕಮಾಂಡ್‌ ಕೃಷ್ಣ ಮನವೊಲಿಸಲಿ
ಹೈಕಮಾಂಡ್‌ ಕೃಷ್ಣ ಮನವೊಲಿಸಲಿ   

ಪಾಂಡವಪುರ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಎಸ್.ಎಂ.ಕೃಷ್ಣ ಅವರ ನಿರ್ಧಾರ ನಮಗೆ ದೊಡ್ಡ ಆಘಾತವಾಗಿದ್ದು, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೈಕಮಾಂಡ್‌ ಹೊರಬೇಕಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಮಂಜುನಾಥ್‌ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್‌ ಎಸ್.ಎಂ.ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ ಅವರನ್ನು ಮನವೊಲಿಸಬೇಕಾಗಿದೆ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಿ ಪಕ್ಷದಲ್ಲಿಯೇ ಉಳಿಯುವಂತೆ ಮಾಡಬೇಕು. ಇಲ್ಲದಿದ್ದರೆ ಬ್ಲಾಕ್‌ ಕಾಂಗ್ರೆಸ್‌ನ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಎಸ್.ಎಂ.ಕೃಷ್ಣ ಅವರು ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧರಾಗಿ ಅವರ ಹಾದಿಯಲ್ಲಿ ನಡೆಯುವುದಾಗಿ ಎಚ್ಚರಿಸಿದರು.

ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ತುಂಬ ಶ್ರಮಿಸಿದ್ದಾರೆ. ಅವರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್‌ ಬಲಯುತವಾಗಿ ಬೇರೂರಲು ಸಾಧ್ಯವಾಯಿತು. ಅವರು ಮುಖ್ಯಮಂತ್ರಿಯಾಗಿದ್ದಾಗ ಬರಗಾಲ, ರಾಜ್‌ಕುಮಾರ್ ಅಪಹರಣ, ಕಾವೇರಿ ವಿವಾದ ಎದುರಾಯಿತು. ಆದರೂ ವಿಚಲಿತರಾಗದ ಎಸ್.ಎಂ.ಕೃಷ್ಣ ಅವರು ಸಮಸ್ಯೆಗಳನ್ನು ಬಗೆಹರಿಸಿ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ದರು. ಬೆಂಗಳೂರು ಸಿಲಿಕಾನ್ ಸಿಟಿ ಎಂದು ಕರೆಯುವಂತೆ ಮಾಡಿದರು ಎಂದರು. ಅವರ ಆಡಳಿತದಲ್ಲಿ ಪಕ್ಷವು ಕೂಡ ಬಲಯುತವಾಗಿತ್ತು ಎಂದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ತ್ಯಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮೇಗೌಡ, ಶೋಭಾ ಕುಮಾರ್, ಮಾಜಿ ಅಧ್ಯಕ್ಷ ಸ್ವಾಮಿಗೌಡ, ಪಿಎಸ್ಎಸ್‌ಕೆ ಮಾಜಿ ಅಧ್ಯಕ್ಷ ಡಾ.ಎಂ.ಮಾಯಿಗೌಡ, ಮನ್‌ಮುಲ್ ಉಪಾಧ್ಯಕ್ಷ ರವಿಕುಮಾರ್, ಕೃಷಿಕ್‌ ಸಮಾಜದ ಅಧ್ಯಕ್ಷ ವಿಶ್ವನಾಥ್, ಪಿಕಾರ್ಡ್‌ ಮಾಜಿ ಅಧ್ಯಕ್ಷ ಹೊನಗಾನಹಳ್ಳಿ ರಾಮೇಗೌಡ, ಮುಖಂಡರಾದ ಎಚ್.ಕೃಷ್ಣೇಗೌಡ, ದೇವರಾಜು, ಪ್ರಕಾಶ್‌, ಕುಬೇರ, ಚಿಕ್ಕಾಡೆ ರಾಮಕೃಷ್ಣ, ಮಹೇಶ್ ಇತರರು ಇದ್ದರು.

ಹಿರಿಯರಿಗೆ ಗೌರವ ನೀಡಲಿ
ಕೆ.ಆರ್.ಪೇಟೆ:
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ  ಅವರು ಪಕ್ಷವನ್ನು ತ್ಯಜಿಸಿ ರುವುದು ಪಕ್ಷದ ಹಿರಿಯನಾಯಕರ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದ್ದ ಎಸ್.ಎಂ.ಕೃಷ್ಣ ಅವರು ತಮ್ಮ ಇಳಿ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದಲ್ಲಿರುವ ಅವರ ಕೋಟ್ಯಂತರ ಅಭಿಮಾನಿಗಳಿಗೆ ದಿಗ್ಭ್ರಮೆ ಉಂಟುಮಾಡಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ  ವಯಸ್ಸಾದ ಹಲವಾರು ರಾಜಕಾರಣಿಗಳಿದ್ದಾರೆ. ಅವರಿಗೆ ಅಧಿಕಾರ ಕೊಡುವುದು ಬೇಡ. ಕನಿಷ್ಠ ಗೌರವಯುತವಾಗಿ ನಡೆಸಿಕೊಳ್ಳಬೇಕು. ಕೃಷ್ಣ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದೂಳೀಪಟವಾಗುವುದು ನಿಶ್ಚಿತ  ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.