ADVERTISEMENT

ಹೋರಾಟದ ಧ್ವನಿ ಹೆಚ್ಚಾಗಲಿ: ಸಲಹೆ

‘ಸಮತೆಗಾಗಿ ಸಹಪಯಣ’ ಕಾರ್ಯಕ್ರಮ ಸಮಾರೋಪ; ಸಾಹಿತಿ ಆರ್‌.ಇಂದಿರಾ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:38 IST
Last Updated 6 ಫೆಬ್ರುವರಿ 2017, 5:38 IST

ಮಂಡ್ಯ: ದೇವಿ, ದೇವತೆಗಳನ್ನು ಅನಾದಿ ಕಾಲದಿಂದಲೂ ಪೂಜೆ ಮಾಡುತ್ತಾ ಬಂದಿದ್ದೇವೆ. ಮಹಿಳಾ ದೇವತೆಗಳೇ ಶಕ್ತಿ ದೇವತೆಗಳಾಗಿದ್ದಾರೆ. ಜತೆಗೆ, ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿರುವವರೂ ಮಹಿಳೆಯರೇ ಆಗಿದ್ದಾರೆ ಎಂದು ಸಾಹಿತಿ ಆರ್‌.ಇಂದಿರಾ ಹೇಳಿದರು.

ನಗರದಲ್ಲಿ ಭಾನುವಾರ ಸಮಾರೋಪಗೊಂಡ ‘ಸಮತೆಗಾಗಿ ಸಹಪಯಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರು ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ವಾಸ್ತವದಲ್ಲಿ ಮಹಿಳೆಯರ ಚಿತ್ರಣ ಬೇರೆಯೇ ಇದೆ. ಶಾಲಾ–ಕಾಲೆಜುಗಳಲ್ಲಿ ಯುವ ಮನಸ್ಸುಗಳನ್ನು ಬದಲಾಯಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಸಾಗಬೇಕಾದ ದಾರಿ ದೂರ ಇದೆ. ಹೋರಾಟದ ಧ್ವನಿ ಹೆಚ್ಚಾಗಬೇಕು ಎಂದು ಅವರು ಸಲಹೆ ನೀಡಿದರು.

ಮಹಿಳಾ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಜಾಹಿರಾತುಗಳಲ್ಲಿ ಮಹಿಳೆಯರು ಮಾರಾಟದ ವಸ್ತು ಆಗುತ್ತಿದ್ದಾರೆ. ವಸ್ತು ಆಗದೇ ನಾವು ನಾವಾಗಬೇಕಿದೆ. ಅಸ್ತಿತ್ವವನ್ನು ತೋರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಸಾಹಿತಿ ಕೆ.ಷರೀಫಾ ಅಧ್ಯಕ್ಷತೆ ವಹಿಸಿದ್ದರು. ಮಮತಾ ಅರಸೀಕೆರೆ, ಮಲ್ಲಮ್ಮ ಅಥಣಿ, ಕೆ.ಎಚ್‌.ಮುಸ್ತಾಫ, ಯಮುನಾ ಗಾಂವ್ಕರ್‌ ಉಪಸ್ಥಿತರಿದ್ದರು.

ಶತ್ರು ಗುರುತಿಸುವಲ್ಲಿ ವಿಫಲ: ಖೇದ
ಮಂಡ್ಯ:
ವಿವಿಧ ವೇದಿಕೆಯಡಿ ಹೋರಾಟ ಮಾಡುವ ಬದಲಾಗಿ ಒಂದೇ ವೇದಿಕೆಯಡಿ ಹೋರಾಟ ಮಾಡಬೇಕು. ಆಗ ಮಾತ್ರ ಹೋರಾಟ ಯಶಸ್ಸು ಕಾಣಲು ಸಾಧ್ಯ ಎಂದು ಸಾಹಿತಿ ಕಿರಣ ಗಾಜನೂರು ಹೇಳಿದರು.

ನಗರದಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮತೆಗಾಗಿ ಸಹಪಯಣ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ದಲಿತ, ಮಹಿಳೆ, ಆದಿವಾಸಿ ಹೀಗೆ ಬೇರೆ ಬೇರೆ ಸಮಸ್ಯೆ ಇಟ್ಟುಕೊಂಡು ಬೇರೆ, ಬೇರೆ ವೇದಿಕೆಯಡಿ ಹೋರಾಟ ಮಾಡಲಾಗುತ್ತಿದೆ. ಇದರಿಂದಾಗಿ ಶತ್ರುವನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ ಎಂದರು.

ಮಹಿಳೆಯರನ್ನು ನೋಡುವ ಪುರುಷರ ಗ್ರಹಿಕೆ ಬದಲಾಗಬೇಕು. ಮಹಿಳೆಯರು ಸ್ವಾವಲಂಬಿ ಬದುಕಿನತ್ತ ದಿಟ್ಟ ಹೆಜ್ಜೆಗಳನ್ನು ಇಡಬೇಕು ಎಂದರು.
ಎಂ.ಕೆ.ಮಾಧವಿ ಮಾತನಾಡಿ, ಆಸ್ತಿ, ಮತದಾನ, ನಾಗರಿಕ ಹಕ್ಕುಗಳನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಧರಣಿದೇವಿ ಮಾಲಗತ್ತಿ ಮಾತನಾಡಿ, ಮಹಿಳೆಯರ ವ್ಯಕ್ತಿತ್ವ ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಮೌಢ್ಯತೆಯನ್ನು ತುಂಬಾ ಕಾಣುತ್ತೇವೆ. ಮಹಿಳೆಯರನ್ನು ಮೌಢ್ಯತೆಯಿಂದ ಹೊರ ತರುವ ಕೆಲಸ ಆಗಬೇಕಿದೆ ಎಂದರು.

ಹಿಂದಣದ ಹೆಜ್ಜೆ ಅರಿಯದೇ ಮುಂದಿನ ಹೆಜ್ಜೆ ಇಡಲು ಸಾಧ್ಯವಿಲ್ಲ. ಮಹಿಳಾ ಕೇಂದ್ರೀತ ಹಲವು ಚಳವಳಿ ಗಳು ನಡೆದಿವೆ. ಆದರೂ, ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಕ್ಕಿಲ್ಲ. ಹಕ್ಕುಗಳನ್ನು ಪಡೆಯಲು ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.