ADVERTISEMENT

27ರಂದು ‘ಜ್ಞಾನಾಮೃತ ಭವನ’ ಲೋಕಾರ್ಪಣೆ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 26 ಮೇ 2018, 12:58 IST
Last Updated 26 ಮೇ 2018, 12:58 IST
ನಾಗಮಂಗಲ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ‘ಜ್ಞಾನಾಮೃತ ಭವನ’
ನಾಗಮಂಗಲ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ‘ಜ್ಞಾನಾಮೃತ ಭವನ’   

ನಾಗಮಂಗಲ: ಮನುಷ್ಯನಲ್ಲಿರುವ ಒತ್ತಡ ಹಾಗೂ ಉದ್ವೇಗವನ್ನು ದೂರ ಮಾಡಿ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಲು, ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಲು ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ‘ಜ್ಞಾನಾಮೃತ ಭವನ’ ನಿರ್ಮಿಸಲಾಗಿದ್ದು, 27ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಜಯಲಕ್ಷ್ಮಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಭವನವು ಸುಮಾರು ₹ 1.5 ಕೋಟಿ ವೆಚ್ಚದ್ದಾಗಿದ್ದು 3 ಅಂತಸ್ತನ್ನು ಹೊಂದಿದೆ. ಧ್ಯಾನದ ಸಭಾಂಗಣ, ಊಟದ ಹಾಲ್ ಮತ್ತು ಯೋಗಿನಿಯರು ವಾಸ್ತವ್ಯ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಕಟ್ಟಡವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸುವರು. ನಂತರ ನಡೆಯುವ ಸಮಾರಂಭದಲ್ಲಿ ರಾಜಸ್ಥಾನದ ಅಬುಪರ್ವತದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಅಧ್ಯಕ್ಷರಾದ ರಾಜಯೋಗಿನಿ ಬಿ.ಕೆ.ಕರುಣಾಜಿ ಆಶೀರ್ವಚನ ನೀಡುವರು.ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ಸುರೇಶ್‌ ಗೌಡ, ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ, ರಾಮನಗರ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪಾಲ್ಗೊಳ್ಳುವರು ಎಂದರು.

ವೇದಿಕೆ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9ಕ್ಕೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಾಂತಿ ಸದ್ಭಾವನಾ ಯಾತ್ರೆ ನಡೆಸಲಾಗುವುದು.

ADVERTISEMENT

ಕೆ.ಆರ್.ಪೇಟೆ ತಾಲ್ಲೂಕಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಕೆ.ಉಮಾ, ಸಂಸ್ಥೆಯ ಸಿ.ಕುಮಾರ್, ಎಸ್.ಎಂ.ಕೃಷ್ಣಮೂರ್ತಿ ಮತ್ತು ಲತಾ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.