ADVERTISEMENT

3.4 ಲಕ್ಷ ‘ಮಣ್ಣು ಆರೋಗ್ಯ ಕಾರ್ಡ್‌’ ವಿತರಣೆ

ಯೋಗೇಶ್ ಮಾರೇನಹಳ್ಳಿ
Published 24 ಮೇ 2017, 7:23 IST
Last Updated 24 ಮೇ 2017, 7:23 IST
ಮಂಡ್ಯದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಾದರಿ ಪರೀಕ್ಷಿಸಿ ವಿತರಣೆ ಮಾಡಿರುವ ಮಣ್ಣು ಆರೋಗ್ಯ ಕಾರ್ಡ್‌
ಮಂಡ್ಯದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಾದರಿ ಪರೀಕ್ಷಿಸಿ ವಿತರಣೆ ಮಾಡಿರುವ ಮಣ್ಣು ಆರೋಗ್ಯ ಕಾರ್ಡ್‌   

ಮಂಡ್ಯ: ‘ಮಣ್ಣು ರೈತನ ಕಣ್ಣು’ ಎಂಬ ನಾಣ್ಣುಡಿಯಂತೆ ಮಣ್ಣಿನ ಪೋಷಕಾಂಶ ಹೆಚ್ಚಿಸಲು ರಾಜ್ಯ ಸರ್ಕಾರ ಕೇಂದ್ರದ ನೆರವಿನೊಂದಿಗೆ ಆರಂಭಿಸಿರುವ ‘ಮಣ್ಣು ಆರೋಗ್ಯ ಅಭಿಯಾನ’ಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಣ್ಣಿನ ಗುಣ ತಿಳಿದು ಕೃಷಿ ಮಾಡುವ ಅಭ್ಯಾಸ ಬೆಳೆಸಲು ಸರ್ಕಾರ 2015ರಿಂದ ಈ ಅಭಿಯಾನ ಆರಂಭಿಸಿದೆ. ಇದರಡಿ ಕೃಷಿ ಇಲಾಖೆ ವತಿಯಿಂದ ಹೊಲದ ಮಣ್ಣು ಪರೀಕ್ಷಿಸಿ ರೈತರಿಗೆ ‘ಮಣ್ಣಿನ ಆರೋಗ್ಯ ಕಾರ್ಡ್‌’ ವಿತರಿಸಲಾಗುತ್ತಿದೆ. ಅಭಿಯಾನ ಆರಂಭವಾದ ದಿನದಿಂದ ಈವರಗೆ ಜಿಲ್ಲೆಯಾದ್ಯಂತ 3,44,450 ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗಿದೆ.

‘ನನ್ನ ಎರಡು ಎಕರೆ ಒಣ ಭೂಮಿಯಲ್ಲಿ ಬರೀ ರಾಗಿ ಬೆಳೆಯುತ್ತಿದ್ದೆ. ಪ್ರತಿ ವರ್ಷ ಮಳೆ ಬಿದ್ದಾಗ ರಾಸಾಯನಿಕ ಗೊಬ್ಬರ ಸುರಿದು ಕೃಷಿ ಮಾಡುತ್ತಿದ್ದೆ. ಇಳುವರಿ ವರ್ಷವರ್ಷವೂ ಕಡಿಮೆಯಾಗುತ್ತ ಬರುತ್ತಿತ್ತು. 2015, ಆಗಸ್ಟ್‌ನಲ್ಲಿ  ಆರೋಗ್ಯ ಕಾರ್ಡ್‌ ಪಡೆದಾಗ ಭೂಮಿ ತರಕಾರಿ ಬೆಳೆಗೆ ಸೂಕ್ತವಾಗಿರುವ ವಿಷಯ ತಿಳಿಯಿತು. ರೈತ ಸಂಪರ್ಕ ಕೇಂದ್ರದ ಮಾರ್ಗದರ್ಶನ ಪಡೆದು ಈಗ ತರಕಾರಿ ಬೆಳೆಯುತ್ತಿದ್ದೇನೆ’ ಎಂದು ತಾಲ್ಲೂಕಿನ ಪಣಕನಹಳ್ಳಿ ಗ್ರಾಮದ ರೈತ ನಾಗೇಗೌಡ ಹೇಳಿದರು.

ADVERTISEMENT

ಕಾರ್ಡ್‌ನಲ್ಲಿ ಏನೇನಿದೆ?: ಕೃಷಿ ಭೂಮಿಯ ಮಣ್ಣಿನ ಮಾದರಿ ಸಂಗ್ರಹಿಸಿ ನಗರದಲ್ಲಿರುವ ಮಣ್ಣು ಆರೋಗ್ಯ ಪರೀಕ್ಷಾ ಕೇಂದ್ರದಲ್ಲಿ ಮಣ್ಣಿನ ಗುಣ ವಿಶ್ಲೇಷಣೆ ಮಾಡಲಾಗುತ್ತದೆ. ಮಣ್ಣಿನಲ್ಲಿರುವ 12 ಅಂಶ ಗುರುತಿಸಲಾಗುತ್ತದೆ. ಪ್ರಧಾನವಾಗಿ ಸಾರಜನಕ, ರಂಜಕ, ಪೊಟ್ಯಾಷ್‌, ಗಂಧಕಾಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ನಂತರ ಲಘು ಪೋಷಕಾಂಶಗಳಾದ ಸತು, ತಾಮ್ರ, ಮ್ಯಾಂಗನೀಸ್‌, ಕಬ್ಬಿಣ ಅಂಶವನ್ನು ಗುರುತಿಸಲಾಗುತ್ತದೆ. ಕಾರ್ಡ್‌ನಲ್ಲಿ ರೈತನ ಹೆಸರು, ಭೂಮಿಯ ಸರ್ವೆ ನಂಬರ್‌, ವಿಸ್ತ್ರೀರ್ಣ ವಿವರ ನೀಡಿ ಮಣ್ಣಿನಲ್ಲಿರುವ ಪೋಷಕಾಂಶಗಳ ಮಾಹಿತಿ ಇದೆ.

ಮಣ್ಣಿನ ಪೋಷಕಾಂಶ ಗುರುತಿಸಿದ ನಂತರ ಆ ಭೂಮಿಯಲ್ಲಿ ಬೆಳೆಯಬಹುದಾದ ಬೆಳೆ ವಿವರ ನೀಡಲಾಗಿದೆ. ಆ ಭೂಮಿಗೆ ಎಷ್ಟು ರಾಸಾಯನಿಕ ಗೊಬ್ಬರದ ಅವಶ್ಯಕತೆ ಇದೆ, ಸಾವಯವ ಗೊಬ್ಬರದ ಅವಶ್ಯಕತೆ ಕುರಿತ ಮಾಹಿತಿ ಕಾರ್ಡ್‌ನಲ್ಲಿದೆ.

ಜಾನುವಾರು ಗೊಬ್ಬರ, ಸಸ್ಯಜನ್ಯ ಕಸದ ಬಗ್ಗೆಯೂ ಮಾಹಿತಿ ಇದೆ. ಬಿತ್ತನೆಯ ಪೂರ್ವ ಹಾಗೂ ಬಿತ್ತನೆಯ ನಂತರ ಯಾವ ಯಾವ ಹಂತದಲ್ಲಿ ಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಬೇಕು ಎಂಬ ಶಿಫಾರಸುಗಳು ಕಾರ್ಡ್‌ನಲ್ಲಿವೆ.

‘ರೈತರಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಕೃಷಿ ಮಾಡುವ ಗುಣ ಬೆಳೆಸುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತಿದೆ. ಕಾರ್ಡ್‌ನಲ್ಲಿರುವ ಶಿಫಾರಸಿನ ಆಧಾರದ ಮೇಲೆ ಮೂರು ವರ್ಷಗಳವರೆಗೆ ಬೇಸಾಯ ಮಾಡಬಹುದು.

ನಾವು ಕಾರ್ಡ್‌ ವಿತರಿಸಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ, ನಮ್ಮ ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಸಲಹೆ, ಸೂಚನೆ ನೀಡುತ್ತವೆ. ಸದ್ಯಕ್ಕೆ ಮೊದಲ ಹಂತದ ಅಭಿಯಾನ ಮುಗಿದಿದ್ದು ಎರಡನೇ ಹಂತದ ಅಭಿಯಾನ ಆರಂಭಿಸುತ್ತಿದ್ದೇವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾಸುಲೋಚನಾ ಹೇಳಿದರು.

ಆನ್‌ಲೈನ್‌ ಮೂಲಕ ಸರ್ವೆ...
ಮಣ್ಣಿನ ಆರೋಗ್ಯ ಕಾರ್ಡ್‌ ವಿತರಣೆಗೆ ಗೂಗಲ್‌ ಮ್ಯಾಪ್‌ ಸರ್ವೆ ಮೂಲಕ ಭೂಮಿ ಗುರುತಿಸಿ ಮಾದರಿ ಸಂಗ್ರಹ ಮಾಡಲಾಗುತ್ತದೆ. ಒಣ ಭೂಮಿಯಾದರೆ 10 ಹೆಕ್ಟೇರ್‌, ನೀರಾವರಿ ಭೂಮಿಯಾದರೆ 2.5 ಹೆಕ್ಟೇರ್‌ ಭೂಮಿ ಆಯ್ಕೆ ಮಾಡಿಕೊಂಡು ಗ್ರಿಡ್‌ಗಳ ಮೂಲಕ ಮಾದರಿ ಸಂಗ್ರಹ ಮಾಡಲಾಗುತ್ತದೆ.

ನಂತರ ಭೂಮಿಯ ಸರ್ವೆ ನಂಬರ್‌ ಗುರುತಿಸಿ  ರೈತರನ್ನು ಆಯ್ಕೆ ಮಾಡಿ ಆರೋಗ್ಯ ಕಾರ್ಡ್‌ ವಿತರಣೆ ಮಾಡಲಾಗುತ್ತದೆ. ‘ರೈತರ ಮನೆಯ ಬಾಗಿಲಿಗೆ ಹೋಗಿ ಕಾರ್ಡ್‌ ಕೊಡುತ್ತೇವೆ. ಇದು ಸಂಪೂರ್ಣ ಉಚಿತವಾಗಿದ್ದು ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತದೆ’ ಎಂದು ಜೆಡಿ ರಾಜಾಸುಲೋಚನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.