ADVERTISEMENT

ಉತ್ಸಾಹ ಇಮ್ಮಡಿಸಿದ ಕೃಷ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:18 IST
Last Updated 9 ಜನವರಿ 2018, 5:18 IST
ಎಸ್‌.ಎಂ.ಕೃಷ್ಣ
ಎಸ್‌.ಎಂ.ಕೃಷ್ಣ   

ಮಂಡ್ಯ: ಜ.19ರಂದು ಜಿಲ್ಲೆ ಪ್ರವೇಶಿಸುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆಯಲ್ಲಿ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಪಾಲ್ಗೊಳ್ಳುವ ಭರವಸೆ ನೀಡಿರುವುದು ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಕೃಷ್ಣ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ನಂತರ ಸಾರ್ವಜನಿಕವಾಗಿ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರ ಲಿಲ್ಲ. ಅಲ್ಲದೆ ಈಚೆಗೆ ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತೀನಗರಕ್ಕೆ ಬಂದಿದ್ದ ವೇಳೆ ಕಾರ್ಯಕರ್ತರು ಅವರನ್ನು ಭೇಟಿ ಯಾಗಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಅವರು ಯಾತ್ರೆಯಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದರು. ಹೀಗಾಗಿ ಮದ್ದೂರು ಕ್ಷೇತ್ರದ ಕಾರ್ಯಕರ್ತರರಲ್ಲಿ ಸಂತಸ ಮೂಡಿಸಿದೆ.

ಅಲ್ಲದೆ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಕೂಡ ಬೆಂಗಳೂರಿನಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದು, ಅದಕ್ಕೆ ಕೃಷ್ಣ ಸಮ್ಮತಿಸಿದ್ದಾರೆ.

ADVERTISEMENT

‘ನಮ್ಮ ಕ್ಷೇತ್ರದ ಹಿರಿಯ ಮುಖಂ ಡರು ಕಾರ್ಯಕ್ರಮಕ್ಕೆ ಬಂದರೆ ಮದ್ದೂರು ತಾಲ್ಲೂಕಿನಲ್ಲಿ ಬಿಜೆಪಿಗೆ ಇನ್ನೂ ಹೆಚ್ಚಿನ ಬಲ ಬರಲಿದೆ. ಮುಂದಿನ ವಾರ ಮತ್ತೊಮ್ಮೆ ಆಹ್ವಾನ ಪತ್ರಿಕೆ ನೀಡಿ ಅವರನ್ನು ಆಮಂತ್ರಿಸುತ್ತೇವೆ’ ಎಂದು ಬಿಜೆಪಿ ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ್‌ ಕುಮಾರ್‌ ಹೇಳಿದರು.

ಸ್ಪರ್ಧೆ ನೀಡಲು ಬಿಜೆಪಿ ಸಿದ್ಧತೆ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡುತ್ತಿದ್ದಾರೆ. ಮದ್ದೂರು ಜೊತೆಗೆ ಶ್ರೀರಂಗಪಟ್ಟಣ, ಮಳವಳ್ಳಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಜಿಲ್ಲೆಯಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಆದರೆ ಜೆಡಿಎಸ್‌ ಭದ್ರಕೋಟೆಯಾಗಿರುವ ಮದ್ದೂರು ಕ್ಷೇತ್ರದಲ್ಲಿ ಕಮಲ ಅರಳಲು ಅವಕಾಶ ಸಿಗಬಹುದೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಮೂಡಿದೆ.

‘ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ಮತಗಳನ್ನು ಹೊಂದಿದೆ. ಹೆಚ್ಚು ಶ್ರಮಿಸಿದರೆ ಖಂಡಿತಾ ಗೆಲುವು ಸಾಧಿಸಬಹುದು. ಈ ಬಾರಿ ಎಸ್‌.ಎಂ.ಕೃಷ್ಣ ಬಿಜೆಪಿಗೆ ಸೇರಿರುವ ಕಾರಣ ಹಳೇ ಕಾಂಗ್ರೆಸ್ಸಿಗರು ಬಿಜೆಪಿ ಬೆಂಬಲಿಸಲಿದ್ದಾರೆ’ ಎಂದು ಲಕ್ಷ್ಮಣ್‌ಕುಮಾರ್‌ ತಿಳಿಸಿದರು.

‘ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದ್ದು ಅದು ಬಿಜೆಪಿಗೆ ವರವಾಗಲಿದೆ. ಮದ್ದೂರಿನಿಂದ ಸ್ಪರ್ಧಿಸುವಂತೆ ನನ್ನ ಕಾರ್ಯಕರ್ತರ ಒತ್ತಡ ಹೆಚ್ಚುತ್ತಿದೆ. ಲಕ್ಷ್ಮಣ್‌ಕುಮಾರ್‌ ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದ್ದರಿಂದ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರ ಅಂತಿಮ’ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

ಕಾಂಗ್ರೆಸ್‌ಗೆ ಪ್ರಬಲ ನಾಯಕರ ಕೊರತೆ: ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳಿಗೆ ಕೊರತೆ ಇಲ್ಲ. ಆದರೆ ಜೆಡಿಎಸ್‌ ಕೋಟೆ, ಬಿಜೆಪಿಯ ಹೊಸ ಪರಿವರ್ತನೆಯನ್ನು ಎದುರಿಸುವಂತಹ ನಾಯಕರ ಕೊರತೆ ಇದೆ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ ಕೊರಗು. ಮಧು ಮಾದೇಗೌಡ, ಕಲ್ಪನಾ ಸಿದ್ದರಾಜು, ಗುರುಚರಣ್‌, ಡಾ.ಮಹೇಶ್‌ ಚಂದ್‌, ಕದಲೂರು ರಾಮಕೃಷ್ಣ ಮುಂತಾದವರು ಪ್ರಮುಖ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

‘ಮನೆ ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮದ ಮೂಲಕ ಜನರಿಗೆ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿದ್ದೇವೆ. ತಳಮಟ್ಟದಲ್ಲಿ ಕಾಂಗ್ರೆಸ್‌ ಬಲಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ತಾಲ್ಲೂಕಿನ ಜನರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಬಯಸಿದ್ದಾರೆ ಎಂದು ಮಧು ಮಾದೇಗೌಡ ಹೇಳುತ್ತಾರೆ.

ಶೀಘ್ರವೇ 200ಕ್ಕೂ ಮುಖಂಡರು ಬಿಜೆಪಿಗೆ

‘ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಹಲಗೇಗೌಡ ಅವರ ಪುತ್ರ, ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಸೇರಿದಂತೆ ವಿವಿಧ ಪಕ್ಷಗಳ 200ಕ್ಕೂ ಹೆಚ್ಚು ಮುಖಂಡರು ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ. ಜೆಡಿಎಸ್‌ ಮುಖಂಡರು ಬಿಜೆಪಿಗೆ ಸೇರಲು ತುದಿಗಾಲ ಮೇಲೆ ನಿಂತಿರುವುದು ಸಂಸಸ ತಂದಿದೆ. ಗ್ರಾಮ ಪಂಚಾಯತಿ ಸದಸ್ಯರು, ಬ್ಯಾಂಕ್‌, ಸೊಸೈಟಿ, ಡೇರಿಯನ್ನು ಪ್ರತಿನಿಧಿಸುವ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ’ ಎಂದು ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

* * 

ಕೆಲಸ ಮಾಡದೆ ನಾನು ಯಾವ ಕಿರೀಟಕ್ಕೂ ಆಸೆ ಪಡುವವನಲ್ಲ. ತಾಲ್ಲೂಕಿನಲ್ಲಿ ದುಡಿಮೆ ಮಾಡಿ ಜನರ ಮುಂದೆ ವೋಟು ಕೇಳುತ್ತಿದ್ದೇನೆ. ಬೇರೆ ಪಕ್ಷಗಳ ರೀತಿಯಲ್ಲಿ ನಾನು ಜನರನ್ನು ಆಕರ್ಷಣೆ ಮಾಡುತ್ತಿಲ್ಲ
ಡಿ.ಸಿ.ತಮ್ಮಣ್ಣ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.