ADVERTISEMENT

ಜೀವ ಕೈಯಲ್ಲಿಡಿದು ಮಹಿಳೆಯರ ಪಯಣ

ಎಂ.ಎನ್.ಯೋಗೇಶ್‌
Published 17 ಜನವರಿ 2018, 5:43 IST
Last Updated 17 ಜನವರಿ 2018, 5:43 IST
ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಶಾಹಿ ಗಾರ್ಮೆಂಟ್‌ ಕಾರ್ಖಾನೆಗೆ ಗೂಡ್ಸ್‌ ವಾಹನಗಳಲ್ಲಿ ತೆರಳುತ್ತಿರುವ ಮಹಿಳೆಯರು
ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಶಾಹಿ ಗಾರ್ಮೆಂಟ್‌ ಕಾರ್ಖಾನೆಗೆ ಗೂಡ್ಸ್‌ ವಾಹನಗಳಲ್ಲಿ ತೆರಳುತ್ತಿರುವ ಮಹಿಳೆಯರು   

ಮಂಡ್ಯ: ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಗಾರ್ಮೆಂಟ್‌ ಕಾರ್ಖಾನೆಗೆ ಕೆಲಸಕ್ಕೆ ಬರುವ ಎಂಟು ಸಾವಿರ ರೈತ ಮಹಿಳೆಯರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಸರಕು ಸಾಗಣೆ ವಾಹನಗಳಲ್ಲಿ ದನಗಳಂತೆ ಅಪಾಯದಲ್ಲೇ ಪ್ರಯಾಣ ಮಾಡುತ್ತಿದ್ದಾರೆ.

ಸಾಕಷ್ಟು ಮಹಿಳೆಯರು ಗಾರ್ಮೆಂಟ್‌ ಕಾರ್ಖಾನೆಯಲ್ಲಿ ದುಡಿದು ತುತ್ತಿನ ಚೀಲ ತುಂಬಿಸುತ್ತಿದ್ದಾರೆ. ಜಿಲ್ಲೆ ಸೇರಿ ಮೈಸೂರು, ಚಾಮರಾಜನಗರ ಜಿಲ್ಲೆಯ ಗಡಿ ಗ್ರಾಮಗಳಿಂದ ಇಲ್ಲಿಗೆ ಬರುತ್ತಾರೆ. ಒಂದು ಸಣ್ಣ ವಾಹನದಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿ ಇರುವ ಕಾರ್ಖಾನೆಗೆ ಸರಕು ಸಾಗಿಸುವ ವಾಹನಗಳಲ್ಲಿ ಬಂದಿಳಿಯುತ್ತಾರೆ.ಬೆಳಿಗ್ಗೆ 8.30ರಿಂದ 9 ಗಂಟೆಯೊಳಗೆ ನೂರಾರು ವಾಹನಗಳು ಎಲ್ಲಾ ದಿಕ್ಕುಗಳಿಂದಲೂ ಬಂದು ಕಾರ್ಖಾನೆಯ ಮುಂದೆ ನಿಲ್ಲುತ್ತವೆ. ಟೆಂಪೊ ಒಳಗೆ ಮರದ ಹಲಗೆಯಿಂದ ಬಾಲ್ಕನಿ ನಿರ್ಮಿಸಲಾಗಿದೆ.

ಅದರ ಮೇಲೆ ಹಾಗೂ ಕೆಳಗೆ ಕುಳಿತು ಮಹಿಳೆಯರು ಪ್ರಯಾಣ ಮಾಡುತ್ತಾರೆ. ಮನೆಯ ಕೆಲಸ ಮುಗಿಸಿ ವಾಹನ ಹತ್ತುವ ಮಹಿಳೆಯರು ಬೆಳಿಗ್ಗೆಯ ತಿಂಡಿಯನ್ನು ವಾಹನದಲ್ಲೇ ತಿನ್ನುತ್ತಾರೆ. ಮಿತಿಗಿಂತ ಹೆಚ್ಚು ಜನರನ್ನು ಕುರಿಗಳಂತೆ ತುಂಬಿಕೊಂಡು ಬರುವುದು ಕಂಡುಬರುತ್ತದೆ.

ADVERTISEMENT

‘ಕಾರ್ಖಾನೆ ಆರಂಭವಾದ ದಿನದಿಂದ ಈ ಗೂಡ್ಸ್‌ ವಾಹನಗಳ ಅಪಘಾತದಿಂದ 10ಕ್ಕೂ ಹೆಚ್ಚು ಮಹಿಳೆಯರು ಮೃತಪಟ್ಟಿದ್ದಾರೆ. ಕಾರ್ಖಾನೆ ಮಾಲೀಕರಿಗೆ ಕಾರ್ಮಿಕರ ಸುರಕ್ಷತೆ ಬೇಕಾಗಿಲ್ಲ. ಗ್ರಾಮೀಣ ರೈತ ಮಹಿಳೆಯರು ಅವರಿಗೆ ಬಿಟ್ಟಿ ಬಿದ್ದಿದ್ದಾರೆ. ನಿಯಮಗಳ ಪ್ರಕಾರ ಕಾರ್ಖಾನೆಯೇ ವಾಹನ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಯಾವ ನಿಯಮವೂ ಲೆಕ್ಕಕ್ಕೆ ಇಲ್ಲ. ಪೊಲೀಸರು, ಆರ್‌ಟಿಒ ಅಧಿಕಾರಿಗಳನ್ನು ಹಣಕ್ಕೆ ಕೊಂಡುಕೊಂಡಿದ್ದಾರೆ. ಕಾರ್ಖಾನೆಯು ಅನ್ಯಾಯವಾಗಿ ಬಡ ಮಹಿಳೆಯರನ್ನು ಕೊಲ್ಲುತ್ತಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಕುಮಾರಿ ಹೇಳಿದರು. 

ಬಸ್‌ ಹತ್ತದ ಕಾರ್ಮಿಕರು:‘ಸರಕು ಸಾಗಣೆ ವಾಹನಗಳ ಹಾವಳಿ ತಪ್ಪಿಸಲು ಜಿಲ್ಲಾಡಳಿತ ಕಾರ್ಖಾನೆ ಸಮೀಪಕ್ಕೆ ಸಾರಿಗೆ ಬಸ್‌ ಸಂಚರಿಸುವ ವ್ಯವಸ್ಥೆ ಮಾಡಿತ್ತು. ಆದರೆ ದೂರದಿಂದ ಬರುವ ಮಹಿಳೆಯರು ಕಾರ್ಖಾನೆ ತಲುಪಲು ಎರಡು ಬಸ್‌ ಬದಲಾಯಿಸಬೇಕಾಯಿತು.

ನಿಲ್ದಾಣದಿಂದ ಒಂದು ಕಿ.ಮೀ ನಡೆದುಕೊಂಡು ಬರಬೇಕಾಗಿತ್ತು. ಇದರಿಂದಾಗಿ ಮಹಿಳೆಯರು ಬಸ್‌ ಹತ್ತಲು ನಿರಾಕರಿಸಿದರು. ಈಗ ಯಾವುದೇ ಗೂಡ್ಸ್‌ ವಾಹನಗಳಿಗೆ ಕಡಿವಾಣ ಇಲ್ಲದೆ ಓಡಾಡುತ್ತಿವೆ’ ಎಂದು ಗೆಜ್ಜೆಲಗೆರೆಯ ನಿವಾಸಿ ಚಂದ್ರಶೇಖರ್‌ ಹೇಳಿದರು.

ಕಿರುಕುಳ: ಕಾರ್ಖಾನೆ ಸಿಬ್ಬಂದಿಯ ಕಿರುಕುಳಕ್ಕೆ ಮಹಿಳೆಯರು ನಲುಗಿದ್ದಾರೆ. ಮಹಿಳಾ ಆಯೋಗಕ್ಕೂ ದೂರು ನೀಡಿದ್ದು, ಅಧ್ಯಕ್ಷರು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯರು ವೈಯಕ್ತಿಕವಾಗಿ ದೂರು ಸಲ್ಲಿಸದ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.

‘ತಿಂಗಳಾಗುತ್ತಿದ್ದಂತೆ ಸಂಘಕ್ಕೆ ಸಾಲದ ಕಂತು ಕಟ್ಟಬೇಕು, ಹೊಲ ಪಾಳು ಬಿದ್ದಿದೆ. ಮಗನನ್ನು ಇಂಗ್ಲಿಷ್‌ ಮೀಡಿಯಂ ಶಾಲೆಗೆ ಸೇರಿಸಿದ್ದೇನೆ. ಶುಲ್ಕ ಕಟ್ಟಬೇಕು. ನಾನು ದುಡಿಯದಿದ್ದರೆ ಗತಿ ಇಲ್ಲ. ಕಷ್ಟಗಳ ಮುಂದೆ ಈ ಕಿರುಕುಳ ದೊಡ್ಡದಾಗಿ ಕಾಣುತ್ತಿಲ್ಲ’ ಎಂದು ಮಳವಳ್ಳಿ ಮಹಿಳೆಯೊಬ್ಬರು ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಿ ಎಂಟು ಸಾವಿರ ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದೇವೆ. ಗೂಡ್ಸ್‌ ಗಾಡಿಗಳ ಹಾವಳಿಯನ್ನು ಕಾರ್ಮಿಕರೇ ಸೃಷ್ಟಿಸಿರುವ ಸಮಸ್ಯೆ’ ಎಂದು ಕಾರ್ಖಾನೆ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕೆಂಪರಾಜ್‌ ಹೇಳಿದರು.

ಶೌಚಾಲಯಕ್ಕೆ ಹೋಗುವ ಮಹಿಳೆಯರ ತಪಾಸಣೆ

‘ಒಳ ಉಡುಪು ಸೇರಿ ಇತರೆ ಬಟ್ಟೆ ಕದಿಯುತ್ತಾರೆ ಎಂಬ ಆರೋಪ ಹೊರಿಸಿರುವ ಕಾರ್ಖಾನೆ ಸಿಬ್ಬಂದಿ, ಶೌಚಾಲಯಕ್ಕೆ ಹೋಗುವ ಮಹಿಳೆಯರನ್ನೂ ತಪಾಸಣೆ ಮಾಡುತ್ತಾರೆ. ಮೇಲ್ವಿಚಾರಕರು ಕೆಟ್ಟ ಭಾಷೆ ಬಳಸಿ ಬಯ್ಯುತ್ತಾರೆ. ಅನುಭವಿ ಟೇಲರ್‌ಗಳನ್ನು ಹೆಲ್ಪರ್‌ ಕೆಲಸಕ್ಕೆ ನೇಮಿಸಿ ಸೇಡು ತೀರಿಸಿಕೊಳ್ಳುತ್ತಾರೆ. ಮಾತು ಕೇಳಲಿಲ್ಲ ಅಂದರೆ ಕೆಲಸಕ್ಕೆ ಬರುವುದು 1 ನಿಮಿಷ ತಡವಾದರೂ ಇಡೀ ದಿನ ಕೆಲಸ ಕೊಡದೆ ವಾಪಸ್‌ ಕಳುಹಿಸುತ್ತಾರೆ. ಆ ದಿನದ ಸಂಬಳ ಹಿಡಿಯುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಕೆಲವು ಕಾರ್ಮಿಕರು ನೋವು ತೋಡಿಕೊಂಡರು.

* * 

ಗೂಡ್ಸ್‌ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸದಂತೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಆದರೂ ನಿಂತಿಲ್ಲ. ಕಾರ್ಖಾನೆಯಿಂದ ಸಮಸ್ಯೆ ಬಗೆಹರಿಸುವ ಬಗ್ಗೆ ಪರಿಶೀಲಿಸುತ್ತೇವೆ
ಜಿ.ರಾಧಿಕಾ, ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.