ADVERTISEMENT

ಮೀನು ಶಿಕಾರಿ ಹಿನ್ನೆಲೆ: ರಂಗನತಿಟ್ಟಿನಲ್ಲಿ ಭದ್ರತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 6:44 IST
Last Updated 19 ಜನವರಿ 2018, 6:44 IST

ಶ್ರೀರಂಗಪಟ್ಟಣ: ಸಮೀಪದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಮೀನು ಶಿಕಾರಿ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಕ್ಷಿಧಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕು ಸಹಿತ ಪಕ್ಷಿಧಾಮದ ಆಸುಪಾಸಿನಲ್ಲಿ ದಿನದ 24 ಗಂಟೆಯೂ ಗಸ್ತು ತಿರುಗುತ್ತಿದ್ದಾರೆ. ಪಕ್ಷಿಧಾಮದ ಮುಖ್ಯ ಪ್ರವೇಶ ದ್ವಾರ, ಬಂಗಾರದೊಡ್ಡಿ ನಾಲೆಯ ದಿಕ್ಕು, ಪಶ್ಚಿಮ ದಿಕ್ಕಿನ ಎಣ್ಣೆಹೊಳೆಕೊಪ್ಪಲು ಸಂಪರ್ಕ ಪ್ರದೇಶದಲ್ಲಿ ಗಸ್ತು ಹಾಕಲಾಗಿದೆ.

ಹಗಲು ಹೊತ್ತಿನಲ್ಲಿ 26 ಸಿಬ್ಬಂದಿ ಪಕ್ಷಿಧಾಮದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಂಕಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾ ವಹಿಸುತ್ತಿದ್ದಾರೆ ಎಂದು ಪಕ್ಷಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಕ್ಷಿಧಾಮದ ಸುತ್ತಮುತ್ತ ರಾತ್ರಿ ಪಾಳಿಯಲ್ಲಿ ಮತ್ತು ಗಸ್ತು ತಿರುಗಲು 8 ಜನರನ್ನು ಕಾವಲಿಗೆ ನಿಯೋಜಿಸಲಾಗಿದೆ. ಕಾವಲು ಕಾಯುವ ಮೂರೂ ತಂಡಗಳಿಗೆ ಸ್ವರಕ್ಷಣೆಯ ಉದ್ದೇಶದಿಂದ ಬಂದೂಕು ನೀಡಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಡಿಸೆಂಬರ್‌ 17ರಂದು ತಡರಾತ್ರಿ ಪಕ್ಷಿಧಾಮದ ಒಳ ಪ್ರದೇಶ ಪ್ರವೇಶಿಸಿದ್ದ ದುಷ್ಕರ್ಮಿಗಳು ಕಾವೇರಿ ನದಿಯಲ್ಲಿ ಮೀನು ಶಿಕಾರಿ ಮಾಡಿದ್ದರು. ಈ ಹಿಂದೆಯೂ ಹಲವು ಬಾರಿ ಪಕ್ಷಿಧಾಮದಲ್ಲಿ ಮೀನು ಶಿಕಾರಿ ಮಾಡಿದ್ದಾಗಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. ಇತ್ತೀಚೆಗೆ ಮೀನು ಶಿಕಾರಿ ಮಾಡುತ್ತಿದ್ದು ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.