ADVERTISEMENT

ಅಂಬೇಡ್ಕರ್‌ ಕನಸು ನನಸಾಗಿಸಲು ಶ್ರಮಿಸಿ

ಅಂಬೇಡ್ಕರ್‌ ಸ್ಮರಣ ದಿನಾಚರಣೆ: ಸಚಿವ ಶ್ರೀನಿವಾಸಪ್ರಸಾದ್‌ ಕರೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 6:05 IST
Last Updated 22 ಸೆಪ್ಟೆಂಬರ್ 2014, 6:05 IST

ಮೈಸೂರು: ಅಂಬೇಡ್ಕರ್‌ ಮತ್ತು ನಮ್ಮ ಸಂಬಂಧ ತಾಯಿ ಮಗುವಿನ ರೀತಿಯದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು.

ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ಮರಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಕನಸನ್ನು ನನಸು ಮಾಡುವುದು ನಮ್ಮ ಗುರಿಯಾಗಬೇಕು. ತಳ ಸಮುದಾಯದವರಿಗೆ, ಅವಕಾಶ ವಂಚಿತರಿಗೆ ವಿದ್ಯೆ, ಅಧಿಕಾರ. ಅಂತಸ್ತು ಲಭಿಸಬೇಕು ಎನ್ನುವುದು ಅವರ ಕನಾಸಗಿತ್ತು. ಕೆಲವು ಸಂಘಟನೆಗಳು ನಮ್ಮನ್ನೇ ಅಸ್ಪೃಶ್ಯರಂತೆ ನೋಡುವುದು ದಿಗ್ಭ್ರಮೆ ಮೂಡಿಸಿದೆ. ಹೋರಾಟದ ದಿಕ್ಕಿನಲ್ಲಿ ಒಂದಾಗಿ ಸಾಗುವ ಕೆಲಸ ಆಗುತ್ತಿಲ್ಲ. ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಒಂದಾಗಬೇಕು ಎಂದು ಕಿರುಚಾಡುತ್ತೇವೆ. ಡಿಎಸ್‌ಎಸ್‌ ಒಗ್ಗೂಡಿಸಲು ಮಧ್ಯಸ್ಥಿಕೆ ವಹಿಸಬೇಕಾದವರೇ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಅಸ್ಪೃಶ್ಯತೆಯ ವೇದನೆ ಅನುಭವಿಸಿದರಿಗೇ ಗೊತ್ತು. ಅಂಬೇಡ್ಕರ್‌ ಅವರು ಆ ನೋವನ್ನು ಅನುಭವಿಸಿ ಬೆಳೆದವರು. ಶತಮಾನಗಳಿಂದ ಕಗ್ಗತ್ತಲಿನಲ್ಲಿ ಇದ್ದವರನ್ನು ಬೆಳಕಿಗೆ ತಂದವರು ಅವರು. ಸಂವಿಧಾನದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಕಲ್ಪಿಸಿದರು.
ಜಾತಿಯ ಕ್ರೂರ ವ್ಯವಸ್ಥೆ ಇನ್ನೂ ಇದೆ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅವರ ವಿಚಾರಧಾರೆಗಳ ಕುರಿತು ಕಮ್ಮಟಗಳು, ಕಾರ್ಯಾಗಾರಗಳು, ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಆದರೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಆ ರೀತಿಯ ಆಲೋಚನೆಗಳೂ ಮೈಗೂಡುತ್ತಿಲ್ಲ  ಎಂದರು.
ಸಿಎಫ್‌ಟಿಆರ್‌ಐ  ನಿರ್ದೇಶಕ ಪ್ರೊ.ರಾಮರಾಜಶೇಖರನ್‌ ಮಾತನಾಡಿ, ಗುರಿ ಸಾಧನೆಯ ಹಾದಿಯಲ್ಲಿ ಯಾರಿಗೂ ಯಾವುದಕ್ಕೂ ಭಯಪಡದೇ ಮುನ್ನಡೆಯಬೇಕು ಎಂದು ಹೇಳಿದರು.

ಬೌದ್ಧಿಕವಾಗಿ ಸಮೃದ್ಧರಾಗಿದ್ದಾಗ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಆಹಾರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆಹಾರ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯು ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಮಾತನಾಡಿ, ತಳಸಮುದಾಯದವರು ಬೌದ್ಧಿಕ ಸಾಮರ್ಥ್ಯ ಬೆಳೆಸಿಕೊಂಡು ನೀತಿ ನಿರೂಪಕರ ಸ್ಥಾನಕ್ಕೆ ನೇಮಕಗೊಳ್ಳಬೇಕು ಎಂದು ಸಲಹೆ ನೀಡಿದರು.

ಬಲಾಢ್ಯರಿಂದ ಬಲಹೀನರ ರಕ್ಷಣೆ ಪ್ರಜಾಪ್ರಭುತ್ವದ ನೀತಿ. ಜಾಗತೀಕರಣ ಒಪ್ಪಿಕೊಂಡ ಮೇಲೆ ಬೌದ್ಧಿಕ ಸಾಮರ್ಥ್ಯದಿಂದಲೇ ಸ್ಪರ್ಧೆಯನ್ನು ಎದುರಿಸಬೇಕು. ಆಳವಾದ ಅಧ್ಯಯನ, ಪರಿಶ್ರಮ, ಏಕಾಗ್ರತೆ ಇದ್ದರೆ ಬೌದ್ಧಿಕ ಸಂಪನ್ನರಾಗಲು ಸಾಧ್ಯ ಎಂದರು.
ದೇಶದಲ್ಲಿ ಶೇ 42ರಷ್ಟು ಮಕ್ಕಳು ಅನ್ನಾಂಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳಲ್ಲಿ ಬಹುಪಾಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾರೆ. ಶೂದ್ರಶಕ್ತಿಗಳು ಸಂಘಟನಾತ್ಮಕವಾಗಿ ಹೋರಾಡಿ ದೊಡ್ಡಶಕ್ತಿಯಾಗಿ ನಿಲ್ಲಬೇಕು. ಕೋಮುಶಕ್ತಿಯನ್ನು ಹಿಮ್ಮೆಟ್ಟಿಸಬೇಕು ಎಂದು ತಿಳಿಸಿದರು.

ಪ್ರೊ.ಮಹೇಶ್‌ಚಂದ್ರ ಗುರು ಮಾತನಾಡಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ, ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಸೇರಿದಂತೆ ಒಂಬತ್ತು ಬೇಡಿಕೆಗಳ ಮನವಿ ಪತ್ರವನ್ನು ಸಚಿವ ಎಚ್‌.ಸಿ. ಮಹದೇವಪ್ಪ ಅವರಿಗೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ mysdcstep.org  ಸಾಮಾಜಿಕ ಜಾಲತಾಣವನ್ನು ಉದ್ಘಾಟಿಸಲಾಯಿತು.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಧಿಕಾರಿಗಳ ನೌಕರರ ಪರಿಷತ್ತಿನ ಅಧ್ಯಕ್ಷ ಟಿ.ಎಂ ಮಹೇಶ್‌, ಗೌರವ ಅಧ್ಯಕ್ಷ ಶಾಂತರಾಜು, ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.